Kundapra.com ಕುಂದಾಪ್ರ ಡಾಟ್ ಕಾಂ

ಹಲ್ಲುಗಳು ಆರೋಗ್ಯವಾಗಿದ್ದರೇ ದೇಹದ ಆರೋಗ್ಯ ಸುಧೃಡ : ಡಾ. ರಾಜರಾಮ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಕುಂದಾಪುರ, ಮಹಾವಿಷ್ಣು ಯುವಕ ಮಂಡಲ (ರಿ.) ಹರೆಗೋಡು, ಮಾರನಮನೆ ಮಿತ್ರಮಂಡಳಿ(ರಿ.), ತಲ್ಲೂರು ಹಾಗೂ ಮಾನಸ ಯುವತಿ ಮಂಡಲ(ರಿ.) ಹರೆಗೋಡು ಇವರ ಸಹಯೋಗದೊಂದಿಗೆ ಮಣಿಪಾಲ ಕೆ.ಎಂ.ಸಿ. ದಂತ ವೈದ್ಯಕೀಯ ಕಾಲೇಜಿನ ತಜ್ಞ ದಂತ ವೈದ್ಯರಿಂದ ಉಚಿತ ದಂತ ಚಿಕಿತ್ಸಾ ಶಿಬಿರ ಅ.೧೬ರಂದು ಹೆಮ್ಮಾಡಿಯ ಜನತಾ ಪ್ರೌಢ ಶಾಲೆಯಲ್ಲಿ ನಡೆಯಿತು.

ಕುಂದಾಪುರದ ಖ್ಯಾತ ದಂತ ವೈದ್ಯ ಡಾ. ರಾಜರಾಮ ಶೆಟ್ಟಿ ಮಾತನಾಡಿ ಹಲ್ಲುಗಳು ಆರೋಗ್ಯವಾಗಿದ್ದರೇ ದೇಹದ ಆರೋಗ್ಯ ಸುಧೃಡವಾಗಿರಲು ಸಾಧ್ಯ. ದಿನ ನಿತ್ಯ ಆಹಾರ ಸೇವನೆಯ ಬಳಿಕ ಶುದ್ಧ ನೀರಿನಿಂದ ಬಾಯಿಯನ್ನು ಸ್ವಚ್ಚಗೊಳಿಸಿಕೊಳ್ಳುವ ಜೊತೆಗೆ ಬೆಳಿಗ್ಗೆ, ರಾತ್ರಿ ಹಲ್ಲುಜ್ಜುವಾಗ ನಿಯಮಿತ ಕ್ರಮವನ್ನು ರೂಢಿಸಿಕೊಂಡಲ್ಲಿ ಜೀವಿತದ ಕೊನೆಯವರೆಗೆ ಹಲ್ಲು ಹಾಗೂ ಒಸಡುಗಳನ್ನು ಸುರಕ್ಷಿತವಾಗಿ ಸುಧೃಡವಾಗಿಟ್ಟುಕೊಳ್ಳಲು ಸಾಧ್ಯವಿದೆ ಎಂದು ಸಲಹೆಗಳನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ ಶೆಟ್ಟಿ ಮಾತನಾಡಿ ರೋಟರಿಯಿಂದ ಈಗಾಗಲೇ ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಗ್ರಾಮೀಣ ಭಾಗವಾದ ಹೆಮ್ಮಾಡಿಯ ಜನತೆಗೆ ಅನುಕೂಲವಾಗಲೆಂಬ ನಿಟ್ಟಿನಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ತಜ್ಞ ವೈದ್ಯರಿಂದ ಹಮ್ಮಿಕೊಂಡಿದ್ದು, ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು.

ಶಿಬಿರವನ್ನು ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ. ಪುತ್ರನ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ತಾ. ಪಂ. ಸದಸ್ಯ ರಾಜು ದೇವಾಡಿಗ, ಕಟ್‌ಬೆಲ್ತೂರು ಗ್ರಾ. ಪಂ. ಅಧ್ಯಕ್ಷೆ ಅನಸೂಯ ಆಚಾರ್ಯ, ಹೆಮ್ಮಾಡಿ ಗ್ರಾ. ಪಂ ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಕುಂದಾಪುರದ ಯೋಜನಾಧಿಕಾರಿ ಅಮರ್ ಪ್ರಸಾದ್ ಶೆಟ್ಟಿ, ಕಟ್‌ಬೆಲ್ತೂರು ಗ್ರಾ. ಪಂ. ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಸಂಜೀವಿನಿ ಪೈಪ್ಸ್ ಪ್ರೈ. ಲಿ ಆಡಳಿತ ನಿರ್ದೇಶಕ ಮಹಮ್ಮದ್ ಆಲಿ, ಹೆಮ್ಮಾಡಿ ಗ್ರಾ. ಪಂ ಸದಸ್ಯ ಸಯ್ಯಾದ್ ಯಾಸಿನ್, ಹೆಮ್ಮಾಡಿ ಜನತಾ ಫ್ರೌಡ ಶಾಲೆಯ ಮುಖ್ಯೋಪಧ್ಯಾಯ ಮೋಹನದಾಸ್ ಶೆಟ್ಟಿ, ಮಹಾವಿಷ್ಣು ಯುವಕ ಮಂಡಲ (ರಿ.) ಹಾಗೂ ಮಾನಸ ಯುವತಿ ಮಂಡಲ(ರಿ.) ಹರೆಗೋಡು ಇದರ ಸಂಚಾಲಕ ಚಂದ್ರ ನಾಯ್ಕ್, ಗೌರವಾಧ್ಯಕ್ಷ ರಾಘವೇಂದ್ರ ಚರಣ ನಾವಡ, ಅಧ್ಯಕ್ಷ ರವೀಶ್ ಡಿ. ಎಚ್, ತಲ್ಲೂರಿನ ಮಾರನಮನೆ ಮಿತ್ರಮಂಡಳಿ(ರಿ.) ಅಧ್ಯಕ್ಷ ಸದಾಶಿವ ದೇವಾಡಿಗ, ಮಣಿಪಾಲ ಕೆ.ಎಂ.ಸಿ. ದಂತ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿ ಡಾ. ಪ್ರಜ್ಞಾ ಇನ್ನಿತರರು ಉಪಸ್ಥಿತರಿದ್ದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ನರಸಿಂಹ ಗಾಣಿಗ ಹರೆಗೋಡು ಸ್ವಾಗತಿಸಿದರು. ರಾಘವೇಂದ್ರ ಜೋಗಿ ಕೆರೆಮನೆ ಕಟ್‌ಬೆಲ್ತೂರು ಕಾರ್ಯಕ್ರಮ ನಿರ್ವಹಿಸಿ, ಮಾರನಮನೆ ಮಿತ್ರಮಂಡಳಿಯ ಉಪಾಧ್ಯಕ್ಷ ಚಂದ್ರ ದೇವಾಡಿಗ ವಂದಿಸಿದರು. ಸುಮಾರು ೨೦೦ರಷ್ಟು ಫಲಾನುಭವಿಗಳು ಬಾಯಿ ಮತ್ತು ಹಲ್ಲುಗಳ ಸಂಪೂರ್ಣ ತಪಾಸಣೆ, ಚಿಕಿತ್ಸೆಯನ್ನು ಪಡೆದುಕೊಂಡರು.

Exit mobile version