Kundapra.com ಕುಂದಾಪ್ರ ಡಾಟ್ ಕಾಂ

ಬಸ್ರೂರು: ಮಂಗಳೂರು ವಿ.ವಿ ವಾಲಿಬಾಲ್ ಪಂದ್ಯಾವಳಿ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿ ಜೀವನ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯ, ನಿರಂತರವಾಗಿ ಭಾಗವಹಿಸಲು ಅಪೂರ್ವ ಅವಕಾಶ ಒದಗಿಸುವ ಒಂದು ಸುವರ್ಣ ಘಟ್ಟವಾಗಿದೆ. ಗ್ರಾಮೀಣ ಪರಿಸರದ ಕ್ರೀಡಾ ಪ್ರತಿಭೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರದ ಇಲಾಖೆಗಳು ಆದ್ಯತೆಯ ಮೇರೆಗೆ ಕಾರ್ಯನಿರ್ವಹಿಸಬೇಕಾಗಿದೆ. ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಓದು, ಕಲಿಕೆಯ ಬಗೆಗೂ ಗಮನಹರಿಸಿ, ಸಮಯ ನೀಡಬೇಕಾದುದು ಅತ್ಯವಶ್ಯ ಎಂದು ಬೆಂಗಳೂರು ಡೆಂಟಲ್ ಲ್ಯಾಬ್ ಮತ್ತು ಕ್ಲಿನಿಕ್ ವ್ಯವಸ್ಥಾಪಕ ನಿರ್ದೇಶಕ ಬಸ್ರೂರು ಗಣೇಶ್ ಪಡಿಯಾರ್ ಅಭಿಪ್ರಾಯಪಟ್ಟರು.

ಬಸ್ರೂರು ಶ್ರೀ ಶಾರದಾ ಕಾಲೇಜು ಆಶ್ರಯದಲ್ಲಿ ಕಾಲೇಜ್ ಕ್ರೀಡಾಂಗಣದಲ್ಲಿ ಗುರುವಾರ ದಿಂದ ನಡೆಯುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್ ಕಾಲೇಜ್ ಮಟ್ಟದ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ವಿಜೇತ ತಂಡಗಳಿಗೆ ಬಹುಮಾನವಾಗಿ ಐವತ್ತು ಸಾವಿರ ರೂ ನಗದು ಬಹುಮಾನ ಘೋಷಿಸಿದರು.

ಕಾಲೇಜು ಸಂಚಾಲಕ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಅಧ್ಯಕ್ಷ ವೇಣುಗೋಪಾಲ ನೊಂಡ, ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ. ಕೆ, ನರೇಶ್ ಕುಮಾರ್ ಶೆಟ್ಟಿ ಕಂಡ್ಲೂರು, ಹಳೆವಿದ್ಯಾರ್ಥಿ ಸಂಘ ಅಧ್ಯಕ್ಷ ಯೋಗೀಶ್ ಆಚಾರ್ಯ ಇದ್ದರು.

ಕಾಲೇಜು ಪ್ರಾಂಶುಪಾಲ ಕೆ. ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಕಾರ್ಯಕ್ರಮ ನಿರ್ವಹಿಸಿದರು ದೈಹಿಕ ಶಿಕ್ಷಣ ನಿರ್ದೇಶಕ ಸೂರಜ್ ಕುಮಾರ್ ಶೆಟ್ಟಿ ವಂದಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸುಮಾರು ೬೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ವಿಜೇತ ತಂಡ ಪಟೇಲ್ ಸೌಕೂರು ಅಂತಯ್ಯ ಶೆಟ್ಟಿ ಸ್ಮಾರಕ ಬೆಳ್ಳಿಯ ಪರ್ಯಾಯ ಫಲಕ ಪಡೆಯಲಿದೆ.

Exit mobile version