Kundapra.com ಕುಂದಾಪ್ರ ಡಾಟ್ ಕಾಂ

ಗೋಕಿಂಕರ ರಥಯಾತ್ರೆ: ಗೋರಕ್ಷಣೆಯಿಂದ ಸಂಸ್ಕೃತಿ, ಧರ್ಮದ ಉಳಿವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗೋಮಾತೆ ಎಂದಿಗೂ ಶ್ರೇಷ್ಟ. ದೇಶ, ಸಂಸ್ಕೃತಿ, ಧರ್ಮ ಉಳಿಯಬೇಕಾದರೆ ಗೋವುಗಳ ರಕ್ಷಣೆಗೆ ಒತ್ತು ನೀಡಬೇಕಿದೆ. ಈ ನೆಲೆಯಲ್ಲಿ ಗೋವಿನ ಕುರಿತಾದ ಧನಾತ್ಮಕ ಚಿಂತನೆಗಳಿಂದ ಮಾಡುವ ಎಲ್ಲಾ ಕಾರ್ಯಗಳೂ ಯಶಸ್ಸನ್ನು ಕಾಣಲು ಸಹಕಾರಿಯಾಗುತ್ತದೆ ಎಂದು ಧಾರ್ಮಿಕ ಮುಖಂಡ, ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು.

ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗೋವಾದ ರಾಮನಾಥೀ ಕ್ಷೇತ್ರದಿಂದ ಆಗಮಿಸಿದ ಗೋಕಿಂಕರ ರಥಯಾತ್ರೆಯನ್ನು ಸ್ವಾಗತಿಸಿ, ಗೋಧ್ವಜಾರೋಹಣಗೈದು ಮಾತನಾಡಿದರು. ಭಾರತೀಯ ಜನಜೀವನದೊಂದಿಗೆ ಗೋವಿನ ಇತಿಹಾಸ ತಳಕುಹಾಕಿಕೊಂಡಿದೆ. ಅಲ್ಲದೇ ವಿಜ್ಞಾನದ ಸಂಶೋಧನೆಗಳೂ ಗೋವಿನ ಹಿರಿಮೆಯನ್ನು ಒಪ್ಪಿಕೊಂಡಿವೆ ಎಂದ ಅವರು ರಾಮಚಂದ್ರಾಪುರದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಳೆದೆರಡು ದಶಕಗಳಿಂದ ಭಾರತೀಯ ಗೋತಳಿಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆವನ್ನು ಹಮ್ಮಿಕೊಳ್ಳತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಗೋಕಿಂಕರ ರಥಯಾತ್ರೆಯ ಮುಖ್ಯಸ್ಥ ಶಿಶಿರ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿ ಶ್ರೀ ರಾಮಚಂದ್ರಾಪುರ ಮಠದ ಮೂಲಕ ಮಾಡುತ್ತಿರುವ ಗೋರಕ್ಷಣಾ ಕಾರ್ಯಗಳಿಂದ ರಾಜ್ಯಾದ್ಯಂತ ಲಕ್ಷಾಂತರ ಗೋಪ್ರೇಮಿಗಳು ಹುಟ್ಟಿಕೊಂಡಿದ್ದು, ಹಲವಾರು ಗೋಶಾಲೆಗಳು ಸ್ಥಾಪನೆಯಾಗಿವೆ. ದೇಶೀ ಗೋತಳಿಗಳ ಸಂರಕ್ಷಣೆಗಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಮಾಡಿವೆ.

ವಲಯ ಹವ್ಯಕ ಸಭಾದ ಗುರಿಕಾರ ಶ್ರೀಧರ ಭಟ್ ಬೈಂದೂರು, ನಿವೃತ್ತ ಬ್ಯಾಂಕ್ ಅಧಿಕರಿ ಯು. ರಮೇಶ ವೈದ್ಯ ಉಪಸ್ಥಿತರಿದ್ದರು. ತಾಲೂಕು ಹವ್ಯಕ ಸಭಾದ ಅಧ್ಯಕ್ಷ ಉಪ್ರಳ್ಳಿ ಮಂಜುನಾಥ ಭಟ್ ಸ್ವಾಗತಿಸಿ, ಮಕ್ಕಿದೇವಸ್ಥಾನದ ನಾಗರಾಜ ಭಟ್ ವಂದಿಸಿದರು. ವಿ.ಎಚ್.ನಾಯ್ಕ್ ನಿರೂಪಿಸಿದರು.

ಉತ್ತರ ಕನ್ನಡ ಜಿಲ್ಲೆಯಿಂದ ಆಗಮಿಸಿದ ಗೋಕಿಂಕರ ರಥಯಾತ್ರೆಯು ಮೊದಲು ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನ, ಶ್ರೀ ಸೀತಾರಾಮಚಂದ್ರ ದೇವಸ್ಥಾನ ಹಾಗೂ ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಕ ಲ್ಲೂರಿಗೆ ಮಾರ್ಗವಾಗಿ ತೆರಳಿತು.

Exit mobile version