Kundapra.com ಕುಂದಾಪ್ರ ಡಾಟ್ ಕಾಂ

ಹೆರಂಜಾಲು: ಭಗವದ್ಗೀತಾ ಸಪ್ತಾಹದ ಪೂರ್ವಭಾವಿ ಸಮಾಲೋಚನಾ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀಮದ್ಭಗವದ್ಗೀತೆಯು ವ್ಯಕ್ತಿತ್ವ ವಿಕಸನದಲ್ಲಿ ಔಚಿತ್ಯ ಪ್ರಜ್ಞೆಯನ್ನು ಬೋಧಿಸುತ್ತಾ ಸಂತುಲಿನ ಜೀವನ ಪದ್ಧತಿಯನ್ನು ಆಪೇಕ್ಷಿಸುತ್ತದೆ. ಅತಿಯಾದಲ್ಲಿ ಎಲ್ಲವೂ ನ್ಯೂನತೆಯಾಗುವುದರಿಂದ ಸಮಚಿತ್ತ, ಶುದ್ಧಚಾರಿತ್ಯ ಪ್ರತಿ ವ್ಯಕ್ತಿಯ ಆಂತರಿಕ ಮತ್ತು ಸಾಮಾಜಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿನ ಪ್ರಾಮುಖ್ಯತೆಯನ್ನು ಸಾರುತ್ತದೆ. ಕಾಲಾಬಾಧಿತವಾಗದೇ ಇಂದಿಗೂ ಸೂತ್ರಪ್ರಾಯವಾಗಿರುವ ಈ ಕಿರು ಗ್ರಂಥ ವಿಶ್ವ ಮಾನ್ಯವಾಗಿದೆ ಎಂದು ಯಳಜೀತ್ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಮಂಗೇಶ್ ಶೆಣೈ ಹೇಳಿದರು.

ಹೇರಂಜಾಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜ್ಯ ಶಿರಸಿ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಶ್ರೀಗಳ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ನಡೆಯುವ ಭಗವದ್ಗೀತಾ ಸಪ್ತಾಹದ ಪ್ರಯುಕ್ತ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಖಂಬದಕೋಣೆ ಗ್ರಾಪಂ ಸದಸ್ಯ ಹೇರಂಜಾಲು ಪರಂಜ್ಯೋತಿ ಐತಾಳ್ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಸಂತ ವೈ. ಮಂಗೇಶ್ ಶೆಣೈ ಹಾಗೂ ಅವರ ಶಿಷ್ಯವೃಂದದವರು ಸುಮಾರು ಎರಡು ತಾಸು ಭಗವದ್ಗೀತಾ ಪಠನ ಮಾಡಿದರು. ಸಂಚಾಲಕ ಸುಬ್ರಹ್ಮಣ್ಯ ಉಡುಪ, ನಿವೃತ್ತ ಶಿಕ್ಷಕ ಮೆಟ್ಟಿನಹೊಳೆ ಬಡಿಯಾ ಹಾಂಡ, ಕಾಲ್ತೋಡು ಜನಾರ್ದನ ನಾಯಕ್ ಗೀತಾಪಠಣದ ಕುರಿತು ಮಾತನಾಡಿದರು. ಸೀತಾ ಪದ್ಮನಾಭ ಉಡುಪ ಇವರಿಗೆ ಗೀತಾಪಠಣದ ಉಸ್ತುವಾರಿಯಾಗಿ ನೇಮಿಸಲಾಯಿತು. ನಿವೃತ್ತ ಜಾನುವಾರು ಅಧಿಕಾರಿ ಹೇರಂಜಾಲು ನಾಗೇಶ ರಾವ್ ಸ್ವಾಗತಿಸಿ, ನಿರೂಪಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘದ ಸದಸ್ಯೆ ಆಶಾ ಆರ್. ಗಾಣಿಗ ವಂದಿಸಿದರು. ಗ್ರಾಮಸ್ಥರು, ಮಹಿಳೆಯರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Exit mobile version