ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಸುರಭಿ ಇದರ ಆಶ್ರಯದಲ್ಲಿ ಭಾನುವಾರ ರೋಟರಿ ಸಮುದಾಯ ಭವನದಲ್ಲಿ ೨ ದಿನಗಳ ಕಾಲ ನಡೆಯುವ ಕರ್ನಾಟಕ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಲಿಕೆಯ ನಾದ ಸುರಭಿ ಶಿಬಿರವನ್ನು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರೊಫೆಸರ್ ಡಾ. ಶ್ರೀಕಾಂತ್ ರಾವ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಈಗಿನ ಆಧುನಿಕ ಪ್ರಪಂಚದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಪ್ರಮಾಣ ಹೆಚ್ಚಾಗಿದ್ದು, ಜನ್ಮನೀಡಿದ ತಾಯಿ-ತಂದೆ, ವಿದ್ಯೆ ಕಲಿಸಿದ ಗುರುಗಳ ಮೇಲೆ ಹಲ್ಲೆ ಮಾಡುವಂತ ಮಟ್ಟಿಗೆ ಮಕ್ಕಳು ಬೆಳೆದಿರುವುದು ಬೇಸರತರಿಸುವ ವಿಚಾರವಾಗಿದೆ ಎಂದರು.
ಹಿಂದೆ ಗ್ರಾಮೀಣ ಭಾಗದಲ್ಲಿ ಹುಟ್ಟುವುದು ಒಂದು ಶಾಪ ಎಂದು ಅಂದುಕೊಂಡಿದ್ದೆವು. ಆಗ ನಮಗೆ ಯಕ್ಷಗಾನ ಬಿಟ್ಟರೆ ಬೇರಾವ ಮನರಂಜನೆಯಿರಲಿಲ್ಲ. ಈಗಿನ ತಾಂತ್ರಿಕತೆಯಿಂದ ಎಲ್ಲವೂ ಬದಲಾವಣೆಯಾಗಿದೆ. ನಾವು ಇಂಟರ್‌ನೆಟ್ ಯುಗದಲ್ಲಿ ಬಹಳ ವೇಗ ಮತ್ತು ಒತ್ತಡಗಳ ಬದುಕು ಸಾಗಿಸುತ್ತಿದ್ದೇವೆ. ಮನಸ್ಸನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಆರೋಗ್ಯದ ಕಡೆ ಗಮನ ಹರಿಸಲು ಬಿಡುವಿಲ್ಲದೇ ದುಡಿಯುತ್ತಿದ್ದೇವೆ. ಹಣವಿದ್ದರೂ ನೆಮ್ಮದಿ ಇಲ್ಲದ ಜೀವನ ನಡೆಸುವಂತಾಗಿದೆ. ಆಧುನಿಕ ಸಂಸ್ಕಾರಕ್ಕೆ ಒಗ್ಗಿಕೊಂಡು ಮಾನಸಿಕವಾಗಿ ಕುಗ್ಗುತ್ತಿದ್ದೇವೆ ಎಂದರು.
ಸಾಹಿತಿ ಉಪ್ಪುಂದ ವರಮಹಾಲಕ್ಷ್ಮೀ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ವಿದ್ವಾನ್ ಮದೂರು ಪಿ. ಬಾಲಸುಬ್ರಹ್ಮಣ್ಯಂ ಉಡುಪಿ, ಮೆಸ್ಕಾಂ ಶಾಖಾಧಿಕಾರಿ ರಾಘವೇಂದ್ರ ಎಂ., ರೋಟರಿ ಅಧ್ಯಕ್ಷ ಜಿ. ಮಂಜುನಾಥ ಶೆಟ್ಟಿ ಶುಭಹಾರೈಸಿದರು. ಸುರಭಿ ಅಧ್ಯಕ್ಷ ಶಿವರಾಮ ಕೊಠಾರಿ, ನಿರ್ದೇಶಕ ಸುಧಾಕರ್ ಪಿ., ಉಪಸ್ಥಿತರಿದ್ದರು. ಕೃಷ್ಣಮೂತಿ ಉಡುಪ ಸ್ವಾಗತಿಸಿ, ಗಣಪತಿ ಹೋಬಳಿದಾರ್ ನಿರೂಪಿಸಿದರು. ಸುಮಾರು ೬೦ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸೋಮವಾರ ಸಂಗೀತ ವಿದ್ವಾನ್ ಮದೂರು ಪಿ. ಬಾಲಸುಬ್ರಹ್ಮಣ್ಯಂ ಉಡುಪಿ, ಮತ್ತು ತಂಡದವರಿಂದ ಗಾನ ಸಂಜೆ ಸಂಗೀತ ಕಾರ್ಯಕ್ರಮ ನಡೆಯಲಿದೆ.