Kundapra.com ಕುಂದಾಪ್ರ ಡಾಟ್ ಕಾಂ

ನಿತ್ಯ ನಿರಂತರವಾಗಬೇಕಿದೆ ನವೆಂಬರ್‌ನ ಕನ್ನಡ ಪ್ರೀತಿ

ಕರುಣಾಕರ ಬಳ್ಕೂರು | ಕುಂದಾಪ್ರ ಡಾಟ್ ಕಾಂ ಲೇಖನ
ಒಂದು ಭಾಷೆ ಅಳಿಯಿತೆಂದರೆ ಆ ಭಾಷೆಯನ್ನು ಆಶ್ರಯಿಸಿದ ಇಡೀ ಜನಾಂಗದ ಸಮೃದ್ಧ ಪರಂಪರೆ ನಾಶವಾಗುತ್ತದೆ. ಇಂದು ಕನ್ನಡಿಗರು ಸ್ವಭಾಷಾ ಪ್ರೇಮಿಗಳಲ್ಲ, ಹೊರಗಿನವರು ಬಂದರೆ ನಾವು ಅವರ ಭಾಷೆ ಕಲಿತು ಮಾತನಾಡುತ್ತೇವೆಯೇ ಹೊರತು ಅವರು ನಮ್ಮ ಭಾಷೆ ಕಲಿಯುವಂತೆ ಮಾಡುವುದಿಲ್ಲ. ನಮ್ಮ ಮಕ್ಕಳು, ಮೊಮ್ಮಕ್ಕಳಿಗೇ ನಾವು ಕನ್ನಡ ಕಲಿಸುವುದಿಲ್ಲ. ಇಂಗ್ಲಿಷ್ ಮೀಡಿಯಂ ಸ್ಕೂಲುಗಳೇ ಬೇಕು ಹೀಗಾದರೆ ಕನ್ನಡದ ಗತಿಯಂತು ಎನ್ನುವ ಬಗ್ಗೆ ಕನ್ನಡಿಗ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತಲ್ಲವೆ…

ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ
ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಾಂಚಜನ್ಯ ಮೂಡುತ್ತದೆ
ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು
ಅದೇ ಗೋವರ್ಧನ ಗಿರಿಯಾಗುತ್ತದೆ..
ಎಂದು ಮಹಾಕವಿ ಕುವೆಂಪುರವರು ಕನ್ನಡ ಭುವನೇಶ್ವರಿ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಹಾರಿಸಿ ವಿಶ್ವ ಮಾನವ ಸಂದೇಶವನ್ನು ನೀಡಿದ ಮಹಾನ್ ಕವಿ. ಕನ್ನಡ ನಾಡಿನಲ್ಲಿ ಕುವೆಂಪುರಂತಹ ನೂರಾರು ಕವಿಗಳನ್ನು ಪಡೆದಿರುವ ಕನ್ನಡಿಗರೆ ಧನ್ಯರು. ಕನ್ನಡ ನಾಡಿನಲ್ಲಿ ಸಾಹಿತ್ಯ, ಕಲೆ, ಸಂಗೀತ, ನೃತ್ಯ, ವಾಸ್ತುಶಿಲ್ಪ, ಭಾಷೆ, ಸಂಸ್ಕೃತಿಗಳ ತವರೂರು. ಕರುನಾಡು ಪುರಾತನ ಸಂಸ್ಕೃತಿಯನ್ನ್ನು ಹೊಂದಿರುವ ಬೀಡು. ಕವಿ ಪುಂಗವರು, ಕಲಾವಿದರು ಜನಿಸಿ, ರಾಜಮಹಾರಾಜರು ಆಳಿದ ಗಂಡು ಭೂಮಿಯ ನಾಡಿದು. ಕನ್ನಡ ನಾಡಿನಲ್ಲಿ ಕನ್ನಡಿಗನ ನಾಲಿಗೆಯ ಮೇಲೆ ಸದಾ ಕುಣಿದಾಡುವಳು ಕನ್ನಡ ಭಾಷೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವು ಇದೆ. ಕ್ರಿ.ಶ. ೪೫೦ ನೇ ಪ್ರಾಚೀನ ಶಾಸನವಾದ ಹಲ್ಮಿಡಿ ಶಾಸನದಲ್ಲಿ ಕನ್ನಡದ ಪದ ಬಳಕೆಯಾಗಿರುವುದನ್ನು ಕಾಣಬಹುದು. ಆಡಳಿತ ಭಾಷೆಯಾಗಿ ಕನ್ನಡಕ್ಕೆ ಒಂದೂವರೆ ಸಾವಿರ ಇತಿಹಾಸವಿದೆ. ಪರತೀಯರ, ಮೌರ್ಯರ, ಶಾತವಾಹನರ, ಪಲ್ಲವರ ಅಧೀನದಲ್ಲಿದ್ದು ಕರ್ನಾಟಕವು ೪ನೇ ಶತಮಾನದಲ್ಲಿದ್ದ ಕನ್ನಡಿಗರಾದ ಕದಂಬರು ಆಳಲು ಆರಂಭವಾದುದ್ದೇ ಕನ್ನಡ ಆಡಳಿತ ಭಾಷೆಯಾಗಿ ಮೆರೆಯಲು, ಕನ್ನಡ ಸಂಸ್ಕೃತಿ ರೂಪುಗೊಳ್ಳಲು ಕಾರಣವಾಯಿತು ಎನ್ನುವುದು ಐತಿಹಾಸಿಕ ಸತ್ಯ.

ಹಿಂದೆ ವಿಜಯನಗರದ ಆರಸರ ಕಾಲದಲ್ಲಿ ಕನ್ನಡ ನಾಡಿನಲ್ಲಿ ಬಂಗಾರದ ಹೊಗೆಯಾಡುತ್ತಿತ್ತು ಎಂದು ಓದಿದ ಕನ್ನಡಿಗ ಇಂದು ಕನ್ನಡದ ನೆಲದಲ್ಲಿ ಕನ್ನಡದ ಹೊಗೆಯಾಡಲಿ ಎಂದು ಆಶಿಸಿದರೆ ತಪ್ಪೆ? ಕನ್ನಡ ಭಾಷೆಗೆ ೮ ಜ್ಞಾನಪೀಠ ಪ್ರಶಸ್ತಿಯನ್ನು ಮತ್ತು ಶಾಸ್ತ್ರೀಯ ಸ್ಥಾನಮಾನವನ್ನು ಪಡೆದಿರುವ ಹೆಗ್ಗಳಿಕೆ ಹೊಂದಿರುವ ಏಕಮಾತ್ರ ಭಾರತೀಯ ಭಾಷೆ ಎಂದು ಕೋಡು ಮೂಡಿಸಿಕೊಂಡಿರುವ ಕನ್ನಡದ ನುಡಿ, ಎಲ್ಲಡೆ ಹರಡಲಿ ಎಂದು ಅಪೇಕ್ಷೆಸುವುದು ಅತೀಯಾಯಿತೇ? ಎನ್ನುವ ಪ್ರಶ್ನೆಗಳು ಇಂದು ನಮ್ಮನ್ನು ಎಡೆಬಿಡದೇ ಕಾಡುತ್ತಿವೆ. ಆದರೆ ಇದಕ್ಕೆಲ್ಲ ಉತ್ತರ ನೀಡುವವರಾರು? ಕುಂದಾಪ್ರ ಡಾಟ್ ಕಾಂ ಲೇಖನ

ಕನ್ನಡ ನೆಲದಲ್ಲಿ ಐಟಿಬಿಟಿಗಳ ಹಾವಳಿಯಲ್ಲಿ ಇಂದು ಕನ್ನಡಾಂಬೆ ತನ್ನ ನೆಲದಲ್ಲಿ ತನ್ನ ಸ್ಥಾನಮಾನಕ್ಕಾಗಿ ಪರದಾಡುವ ಪರಿಸ್ಥಿತಿ ಒದಗಿ ಬಂದಿರುವುದು ಬೇಸರದ ಸಂಗತಿ. ಇದೀಗ ಅಕ್ಟೋಬರ್ ಕಳೆದು ನವೆಂಬರ್ ತಿಂಗಳ ಹೊಸ್ತಿಲಿಗೆ ಬಂದಿದ್ದೆವೆ. ಒಂದು ತಿಂಗಳು ಕನ್ನಡದ ಹಬ್ಬಕ್ಕೆ ಏನು ತೊಂದರೆ ಇಲ್ಲ ಆದರೆ ಇದು ಕೇವಲ ತೋರಿಕೆಗೆ ಆಗುತ್ತಿರುದು ನಮ್ಮ ದುರಂತ. ಮತ್ತೆ ಕನ್ನಡ ರಾಜ್ಯೋತ್ಸವ ಎನ್ನುವ ಆಚರಣೆ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗುತ್ತಿರುವುದು ವಿಷಾದನೀಯ. ನಾಡಿನಲ್ಲಿ ಕನ್ನಡನುಡಿ, ಕನ್ನಡ ಮನಸ್ಸುಗಳು ಒಂದಾಗಬೇಕು, ಕನ್ನಡ ಕನಸುಗಳು ನನಸಾಗಬೇಕು. ಕನ್ನಡ ರಾಜ್ಯೋತ್ಸವದ ದಿನದಂದು ಕನ್ನಡ ನಾಡು-ನುಡಿ ಕಟ್ಟುವ ಕೆಲಸವು ಅದು ಕೇವಲ ಮಾತಿನಲ್ಲಿರದೇ ಅದು ಕೃತಿಯಲ್ಲಿ ಸಾಕಾರಗೊಳ್ಳಬೇಕು.

ಒಂದು ಭಾಷೆ ಅಳಿಯಿತೆಂದರೆ ಆ ಭಾಷೆಯನ್ನು ಆಶ್ರಯಿಸಿದ ಇಡೀ ಜನಾಂಗದ ಸಮೃದ್ಧ ಪರಂಪರೆ ನಾಶವಾಗುತ್ತದೆ. ಇಂದು ಕನ್ನಡಿಗರು ಸ್ವಭಾಷಾ ಪ್ರೇಮಿಗಳಲ್ಲ, ಪರ ಭಾಷಾ ಪ್ರೇಮಿಗಳು. ಹೊರಗಿನವರು ಬಂದರೆ ನಾವು ಅವರ ಭಾಷೆ ಕಲಿತು ಮಾತನಾಡುತ್ತೇವೆಯೇ ಹೊರತು ಅವರು ನಮ್ಮ ಭಾಷೆ ಕಲಿಯುವಂತೆ ಮಾಡುವುದಿಲ್ಲ. ಹೊರಗಿನವರಿಗೆ ಬಿಡಿ, ನಮ್ಮ ಮಕ್ಕಳು, ಮೊಮ್ಮಕ್ಕಳಿಗೇ ನಾವು ಕನ್ನಡ ಕಲಿಸುವುದಿಲ್ಲ. ಕನ್ನಡ ಮಾಧ್ಯಮ ಶಾಲೆ ಬೇಡ, ಇಂಗ್ಲಿಷ್ ಮೀಡಿಯಂ ಸ್ಕೂಲುಗಳೇ ಬೇಕು ಹೀಗಾದರೆ ಕನ್ನಡದ ಗತಿಯಂತು ಎನ್ನುವ ಬಗ್ಗೆ ಕನ್ನಡಿಗ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತಲ್ಲವೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಪಡೆಯಲು ಕನ್ನಡನಾಡಿನ ಉದ್ದಕೂ ಕನ್ನಡಿಗರು ಹಗಲು ಇರುಳು ಎನ್ನದೇ ದುಡಿದ ಕ್ಷಣಗಳು ಇನ್ನೂ ಮರೆಮಾಚಿಲ್ಲ. ಹಾಗಾಗೀ ಸಿಕ್ಕಿರುವ ಗೌರವದ ಹಿರಿಮೆಯನ್ನು ಕಾಪಾಡಿಕೊಳ್ಳಲು ಕನ್ನಡಿಗರಾದ ನಾವು ಸಿದ್ಧರಾಗಬೇಕಾಗಿದೆ. ನವೆಂಬರ್ ಬಂದಾಗ ಎಚ್ಚೆತ್ತುಕೊಂಡು ಕನ್ನಡ ಕನ್ನಡ ಎಂದು ಬಡಿದಾಡಿದರೆ ಏನೂ ಪ್ರಯೋಜನವಾಗದು. ಬೆಳಗಾಂ, ಕಾಸರಗೊಡು, ಗಡಿನಾಡು ಪ್ರದೇಶಗಳಲ್ಲಿ ಕನ್ನಡನಾಡು-ನುಡಿಯ ಬಗ್ಗೆ ಸರಕಾರ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಕನ್ನಡದ ಕೆಲಸ ನಿತ್ಯನಿರಂತರವಾಗಿರಬೇಕು. ಕನ್ನಡ ಸಾಹಿತ್ಯ ಸಮ್ಮೇಳಗಳು ದುಂದುವೆಚ್ಚವಾಗದೇ, ರಾಜಕೀಯ ವ್ಯಕ್ತಿಗಳಿಗೆ ಹಸಮಣೆಯಾಗದೇ, ಉಂಡು-ತಿನ್ನುವ ಸಂತೆಯಾಗದೇ ಒಟ್ಟಿನಲ್ಲಿ ಅದು ಜಾತ್ರೆಯಾಗಿರದೆ ಕನ್ನಡ ಮನಸ್ಸುಗಳನ್ನು ಜಾಗ್ರತಗೊಳಿಸುವ, ಕನ್ನಡಿಗರಲ್ಲಿ ಕನ್ನಡಾಭಿಮಾನ ಮೂಡಿಸುವಂತಾಗಬೇಕು. ಕುಂದಾಪ್ರ ಡಾಟ್ ಕಾಂ ಲೇಖನ

ಕನ್ನಡಿಗರಿಗೆ ‘ಕನ್ನಡ ಗೆಲ್ಗೆ ಕನ್ನಡ ಬಾಳ್ಗೆ’ ಎಂಬುದೇ ನಿತ್ಯವು ಪಠಿಸುವ ಪಂಚಾಕ್ಷರಿಯಾಗಿ ಕರುನಾಡಿಗೆ ಕನ್ನಡವೇ ಗತಿ, ಅನ್ಯಥಾ ಶರಣಂ ನಾಸ್ತಿ ಎನ್ನುವ ಮನೋಭಾವ ಮೂಡಬೇಕಾಗಿದೆ. ಕನ್ನಡಿಗರು ನಮ್ಮ ಭಾಷೆಯನ್ನು ನಾವು ಎತ್ತದೇ ಹೋದರೆ ಎತ್ತುವವರು ಯಾರು? ಎತ್ತುವುದಕ್ಕೆ ನಿಂತರೆ ತಡೆಯುವವರು ಯಾರು? ವಿಚಾರವಾದಿಗಳು, ರಾಜಕಾರಣಿಗಳು, ಪ್ರಜ್ಞಾವಂತರು, ಕನ್ನಡ ಸಾಹಿತಿಗಳು, ಕನ್ನಡಾಭಿಮಾನಿಗಳು ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ಕನ್ನಡ ಮನಸ್ಸುಗಳು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಕಂಕಣ ತೊಡುವ ಪರಿಸ್ಥಿತಿ ಇಂದು ಅನಿವಾರ್ಯವಾಗಿದೆ. ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡಿಗನಾಗಿರು. ಸಿರಿಗನ್ನಡಂ ಗೆಲ್ಗೆ..!

Exit mobile version