ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಶ್ರೀ ವಿನಾಯಕ ಆಟೋರಿಕ್ಷಾ, ಗೂಡ್ಸ್, ಟೆಂಪೋ ಮತ್ತು ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಮೂರನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ. ಎಂ. ಸುಕುಮಾರ್ ಶೆಟ್ಟಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸಂಘಟನೆಯಿಂದ ಜನಜಾಗೃತಿ, ಆರ್ಥಿಕ ಸ್ಥಿತಿ ಮತ್ತು ಸಮಾಜ ಸುಧಾರಣೆ ಸಾಧ್ಯವಾಗುತ್ತದೆ. ಸಂಘಟನೆಯ ಸದಸ್ಯರ ಏಳಿಗೆಗಾಗಿ ಮತ್ತು ಆರ್ಥಿಕ ಪರಿಸ್ಥಿತಿಯ ಸುಧಾರಣೆಗಾಗಿ ಕೆಲವು ಯೋಜನೆಗಳನ್ನು ಹಾಕಿಕೊಳ್ಳುವ ಕುರಿತು ಚಿಂತನೆ ಮಾಡುವ ಅಗತ್ಯವಿದೆ. ತಮ್ಮ ಜೀವನ ನಿರ್ವಹಣೆಗಾಗಿ ಸೇವಾ ಮನೋಭಾವದಿಂದ ಪ್ರಾಮಾಣಿಕರಾಗಿ ಹೋರಾಟ ಮಾಡುವ ಟ್ಯಾಕ್ಸಿ, ರಿಕ್ಷಾ ಚಾಲಕರು ಸಮಾಜದ ಅವಿಭಾಜ್ಯ ಅಂಗವಾಗಿದ್ದು ಸಾಮಾಜಿಕ ಕಳಕಳಿಯನ್ನು ಹೊಂದಿರುವುದರ ಜತೆಗೆ ಊರಿನ ಅಭಿವೃದ್ಧಿಯಲ್ಲಿಯೂ ತೊಡಗಿಸಿಕೊಳ್ಳುವುದನ್ನು ಕಾಣುತ್ತಿದ್ದೇವೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಉಡುಪಿ ಮಾಜಿ ಶಾಸಕ ಹಾಗೂ ಜಿಲ್ಲಾ ಟ್ಯಾಕ್ಸಿ ಎಸೋಸಿಯೇಶನ್ ಅಧ್ಯಕ್ಷ ಕೆ. ರಘುಪತಿ ಭಟ್ ಚಾಲಕ ಮಾಲಕ ಸಂಘದ ನೂತನ ಕಾರ್ಯಾಲಯ ಉದ್ಘಾಟಿಸಿದರು. ಜಿಪಂ ಸದಸ್ಯ ಶಂಕರ ಪೂಜಾರಿ ಸಂಘದ ಲಾಂಛನ ಬಿಡುಗಡೆಗೊಳಿಸಿದರು. ತಾಲೂಕು ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಸಂಘದ ವ್ಯಾಪ್ತಿಯಲ್ಲಿನ ಎಂಡೋಸಲ್ಫಾನ್ ಪೀಡಿತ ಐದು ಮಕ್ಕಳಿಗೆ ನಗದು ಪುರಸ್ಕಾರ ವಿತರಿಸಿದರು. ಗೋಳಿಹೊಳೆ ಗ್ರಾಮೀಣ ವಿಕಾಸ ಬ್ಯಾಂಕ್ ಶಾಖಾಧಿಕಾರಿ, ಕಸಾಪ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಚಾಲಕ ಭಾಸ್ಕರ ಮರಾಠಿಯವರಿಗೆ ಅಪಘಾತ ಪರಿಹಾರದ ಚೆಕ್ ಹಸ್ತಾಂತರಿಸಿದರು. ಜಿಲ್ಲಾ ಟ್ಯಾಕ್ಸಿ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಮೇಶ ಕೋಟ್ಯಾನ್, ಜಿಪಂ ಸದಸ್ಯ ಸುರೇಶ ಬಟ್ವಾಡಿ, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಉಪಸ್ಥಿತರಿದ್ದರು.
ಬೆಳಿಗ್ಗೆ ಗೋಳಿಹೊಳೆ ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ ಕನ್ನಡ ಧ್ವಜಾರೋಹಣಗೈದರು. ಕನ್ನಡ ಭುವನೇಶ್ವರಿ ದೇವಿಯ ಭಾವಾಚಿತ್ರದೊಂದಿಗೆ ಅಲಂಕೃತ ವಾಹನ ಟ್ಯಾಬ್ಲೊಗೆ ಗ್ರಾಪಂ ಮಾಜಿ ಅಧ್ಯಕ್ಷರಾದ ನರಸಿಂಹ ಆಚಾರ್ ಮತ್ತು ಎಂ. ರಾಜೀವ ಶೆಟ್ಟಿ ಜಂಟಿಯಾಗಿ ಚಾಲನೆ ನೀಡಿದರು. ಬಳಿಕ ಎಲ್ಲೂರಿನಿಂದ ಯಳಜಿತ್‌ವರೆಗೆ ರಿಕ್ಷಾ, ಟ್ಯಾಕ್ಸಿ, ಟೆಂಪೋ, ಗೂಡ್ಸ್ ವಾಹನಗಳ ಅದ್ದೂರಿಯ ಪುರಮೆರವಣೆಗೆ ನೆರವೇರಿತು.