Kundapra.com ಕುಂದಾಪ್ರ ಡಾಟ್ ಕಾಂ

ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ

ಹೆಮ್ಮಾಡಿ ರಾ. ಹೆ. 66ರಿಂದ, ಗ್ರಾಮದ ಮಧ್ಯದಿಂದ ಪಶ್ಚಿಮಾಭಿಮುಖವಾಗಿರುವ ದೇಗುಲವು ಇತಿಹಾಸ ತಜ್ಞರ ಪ್ರಕಾರ 12-13ನೇ ಶತಮಾನಕ್ಕೆ ಸೇರಿದ್ದಾಗಿದೆ. ಬಸ್ರೂರಿನ ಬಸುವರಸನ ಸಾಮಂತನಾದ ಹೇಮಂತ ಎಂಬ ರಾಜನಿಂದ ಸ್ಥಾಪಿಸಲ್ಪಟ್ಟಿದೆ. ಹೇಮಂತ ರಾಜನಾಳಿದ ಊರಾದ ಈ ಗ್ರಾಮವು ಹೇಮಪುರ ಎಂದೂ ಹೆಸರಾಗಿದೆ. ಶ್ರೀಲಕ್ಷ್ಮೀನಾರಾಯಣ ದೇವಸ್ಥಾನವು ಹೆಮ್ಮಾಡಿ ಗ್ರಾಮದ ಹೆಗ್ಗುರುತಾಗಿದೆ. ದೇವಳದ ಚರಿತ್ರೆಯ ಮೂಲಗಳು ಗತಕಾಲಗರ್ಭದಲ್ಲಿ ಲೀನವಾಗಿದ್ದು, ಶ್ರೀಲಕ್ಷ್ಮೀನಾರಾಯಣ ಸ್ವಾಮಿಯ ಮೂಲವಿಗ್ರಹ ಪ್ರತಿಷ್ಠಾಪನೆಯ ಕಾಲ ಹಾಗೂ ಕೃತ್ಯದ ವಿವರಗಳನ್ನು ನಿಶ್ಚಿತವಾಗಿ ಹೇಳಲು ವಿಶ್ವಸನೀಯ ಚಾರಿತ್ರಿಕ ದಾಖಲೆಗಳಾಗಲೀ ಮತ್ತಿತರ ಮೂಲಾಧಾರಗಳು ಲಭ್ಯವಾಗಿಲ್ಲ.

ಬಸ್ರೂರಿನ ಬಸುವರಸನ ಕಾಲದ ಸಾಮಂತನಾಗಿದ್ದ ಹೇಮಂತ ಎಂಬ ರಾಜನು ಸಂತಾನ ಪ್ರಾಪ್ತಿಗಾಗಿ ಈ ದೇವಳವನ್ನು ನಿರ್ಮಿಸಿದನು. ಇಲ್ಲಿನ ಶಿಲಾವಿಗ್ರಹವು ಊರಿನ ಪಶ್ಚಿಮದಲ್ಲಿ ಹರಿಯುವ ಚಕ್ರಾ ಮತ್ತು ಸೌಪರ್ಣಿಕಾ ನದಿ ಸಂಗಮ ಸ್ಥಳದ ಸಮೀಪದ ಮಡುವಿನಲ್ಲಿ ರಾಜನ ಭಟರಾದ ಮೊಗವೀರ ವೃತ್ತಿಯವರಿಗೆ ಬಲೆ ಬೀಸಿದಾಗ ದೊರಕಿದ್ದು, ರಾಜನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡಂತೆ ಮೂರ್ತಿಯನ್ನು ತರಿಸಿ ತನ್ನ ಅರಮನೆಯ ಅರಸುಕೆರೆಯ ಪಶ್ಚಿಮದಲ್ಲಿ ಸ್ಥಾನಿಕರಬೆಟ್ಟು ಎಂಬಲ್ಲಿ
ಪಶ್ಚಿಮಾಭಿಮುಖವಾಗಿ ವಿಗ್ರಹವನ್ನು ಸ್ಥಾಪಿಸಿ ಉಂಬಳಿ-ಉತ್ತರ ಬಿಟ್ಟು ಪೂಜಾದಿ ಕೈಂಕರ್ಯಗಳನ್ನು ಕೈಗೊಳ್ಳಲು ಬೇಕಾದ ವೃತ್ತಿ ಜನರನ್ನು ನೇಮಿಸಿ ಭವತಿಕೋತ್ಸವವನ್ನು ನಡೆಸಲು ಬೇಕಾದ ಉಂಬಳಿಯನ್ನು ಬಿಟ್ಟು ಸ್ಥಾಪಿಸಿದನೆಂದು ದೇವಳದಲ್ಲಿರುವ 4 ಶಿಲಾಶಾಸನಗಳು ಹಾಗೂ ಪುರದ ಹಿರಿಯರಿಂದ ತಿಳಿದುಬರುತ್ತದೆ.

ಸುಂದರ ವಿಗ್ರಹ:

ಈ ದೇವಸ್ಥಾನದಲ್ಲಿ ಪೂಜೆಗೊಳ್ಳುವ ಶ್ರೀಲಕ್ಷ್ಮೀನಾರಾಯಣ ದೇವರ ಕಪ್ಪುಶಿಲಾ ವಿಗ್ರಹವು ಸುಮಾರು ಎರಡೂವರೆ ಅಡಿಗಳಷ್ಟು ಎತ್ತರವಾಗಿದೆ. ಶಂಖ-ಚಕ್ರ, ಗದಾ-ಪದ್ಮಧಾರಿಯಾದ ಶ್ರೀಮನ್ನಾರಾಯಣನ ಮೂರ್ತಿಯು ಅತ್ಯಂತ ಸುಂದರವಾಗಿದೆ. ಈ ಮೂರ್ತಿಯಲ್ಲಿ ಶ್ರೀಲಕ್ಷ್ಮೀ ಶಕ್ತಿಯು ಅಂತರ್ಗತವಾದುದರಿಂದ ಶ್ರೀಲಕ್ಷ್ಮೀನಾರಾಯಣ ಎಂದು
ಕರೆಯಲ್ಪಡುತ್ತದೆ.

ಹೆಮ್ಮಾಡಿ ಹಬ್ಬ:

ಹೆಮ್ಮಾಡಿ ಶ್ರೀಲಕ್ಷ್ಮೀನಾರಾಯಣ ದೇವರ ಶ್ರೀಮನ್ಮಹಾರಥೋತ್ಸವವು ಭಕ್ತರ ಮನದಲ್ಲಿ ಹಬ್ಬದ ಸಂಭ್ರಮವನ್ನು ಅರಳಿಸುತ್ತದೆ. ಶ್ರೀದೇವರ ಶ್ರೀಮನ್ಮಹಾರಥೋತ್ಸವವು ಹೆಮ್ಮಾಡಿ ಸೇರಿದಂತೆ ಕಟ್‌ಬೇಲ್ತೂರು, ದೇವಲ್ಕುಂದ, ಹೊಸಾಡು, ತ್ರಾಸಿ, ಗುಜ್ಜಾಡಿ ಮತ್ತು ಉಪ್ಪಿನಕುದ್ರು ಗ್ರಾಮಗಳ ಹಬ್ಬವಾಗಿದ್ದು ಏಳು ಗ್ರಾಮಗಳ ರಥೋತ್ಸವ ಎಂದೇಪ್ರಸಿದ್ಧವಾಗಿದೆ.

ಜೀರ್ಣೋದ್ಧಾರ:

ದೇವಾಲಯದ ಮೊದಲ ಹಂತದ ಜೀರ್ಣೋದ್ಧಾರ ಮುಕ್ತಾಯ ಕಂಡಿದ್ದು, ಶ್ರೀದೇಗುಲದಲ್ಲಿ ನೂತನವಾಗಿ ಗಣಪತಿ ದೇವರ ಗುಡಿಯನ್ನು ನಿರ್ಮಿಸಲಾಗಿದೆ. ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ದೇಗುಲದ ಶಿಲಾಮಯ ಗರ್ಭಗುಡಿ ಮತ್ತು ಒಳ ಹೆಬ್ಬಾಗಿಲ ಶಿಲಾಮಯ ಪುನರ್ರಚನೆ ಕಾರ್ಯ ಅಂದಾಜು 1.50 ಕೋಟಿ ರೂ. ವೆಚ್ಚದಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಲೇಖನ: ಚಂದ್ರ ಕೆ. ಹೆಮ್ಮಾಡಿ

Exit mobile version