ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುರುಕ್ಷೇತ್ರವೆಂದರೆ ನಮ್ಮ ಮನಸ್ಸಿನಲ್ಲಿ ಅಂತರಂಗದಲ್ಲಿಯೇ ನಡೆಯುವ ಧರ್ಮ ಮತ್ತು ಅಧರ್ಮಗಳ ನಡುವಿನ ತಾಕಲಾಟ, ಗೊಂದಲ. ಎಲ್ಲಾ ಧರ್ಮಗಳಿಗಿಂತಲೂ ಮಿಗಿಲಾದದ್ದು ಮಾನವ ಧರ್ಮ. ಎಲ್ಲಾ ಮತಗಳ ಸಾರವೂ ಅದೇ ಆಗಿದೆ ಎಂದು ಖ್ಯಾತ ಚಿಂತಕ ಡಾ. ರಾಜಾರಾಮ್ ಹೇಳಿದರು.
ಇಲ್ಲಿನ ಸತ್ಯ ಸಾಯಿ ಸೇವಾ ಟ್ರಸ್ಟ್ ಮತ್ತು ಶ್ರೀಮದ್ ಭಗವದ್ಗೀತಾ ಜಯಂತಿ ಆಚರಣಾ ಸಮಿತಿ, ಬೈಂದೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಭಗವದ್ಗೀತಾ ಅಭಿಯಾನ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡುತ್ತಾ ಮಾತನಾಡಿದರು.
ಮನುಷ್ಯನ ಪ್ರವೃತ್ತಿಗಳಾದ ಕಾಮ, ಕ್ರೋಧ, ಮದ, ಮತ್ಸರ, ಮೋಹ ಇವುಗಳು ಹುಟ್ಟುವಾಗಲೇ ಬಂದಿರುತ್ತದೆ. ಇದನ್ನು ಸಾತ್ವಿಕ ರಾಜಸ, ತಾಮಸ ಎಂದು ಮೂರು ವಿಭಾಗಗಳನ್ನಾಗಿ ಮಾಡಲಾಗಿದೆ. ರಾಜಸ- ಮನುಷ್ಯರು, ತಾಮಸ-ರಾಕ್ಷಸರು, ಸಾತ್ವಿಕ-ದೇವತೆಗಳೆಂದು ಕಲ್ಪಿಸಿಕೊಂಡು ತಮಸ್ಸಿನಿಂದ ರಜಸ್ಸಿಗೂ, ರಜಸ್ಸಿನಿಂದ ಸಾತ್ವಿಕತೆಗೂ ಪ್ರಯತ್ನ ಪೂರ್ವಕ ಸಾಗುವ ಅಭ್ಯಾಸ ಮಾಡಿಕೊಂಡರೆ ಸಾತ್ವಿಕತೆ ನಿಜವಾದ ಧರ್ಮ ಸಂಪತ್ತಾಗಿ ಲೋಕವನ್ನು ಸಲಹುತ್ತದೆ ಎಂದರು.
ಶ್ರೀಮದ್‌ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಬಿ. ರಾಮಕೃಷ್ಣ ಶೇರುಗಾರ್ ಅವರು ಶ್ರೀ ಸೋಂದಾ ಸ್ವರ್ಣವಲ್ಲಿ ಮಠಾದೀಶರು ರಾಜ್ಯಾದ್ಯಂತ ಹಮ್ಮಿಕೊಂಡ ’ಗೀತಾಸಪ್ತಾಹ’ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸತ್ಯಾಸಾಯಿ ಸೇವಾ ಟ್ರಸ್ಟ್‌ನ ರಾಜೀವ ಶೆಟ್ಟಿ ವಹಿಸಿದ್ದರು. ವಿಪ್ರರಂಜನಿ ತಂಡದ ಸದಸ್ಯರಾದ ರಮಾದೇವಿ ಆಚಾರ್ಯ, ವಸಂತಿ ಉಡುಪ, ಭಾರತಿ ಉಪಾಧ್ಯಾಯ, ಮಾಲತಿ ಉಡುಪ ಭಗವದ್ಗೀತೆಯ ಕೆಲವು ಅಧ್ಯಾಯಗಳನ್ನು ಪಠಿಸಿದರು. ಸದಾಶಿವ ಉಡುಪ ಸ್ವಾಗತಿಸಿದರು. ವಿ. ಹೆಚ್ ನಾಯಕ್ ವಂದಿಸಿದರು, ಯು ಗಣೇಶ ಪ್ರಸನ್ನ ಮಯ್ಯ ಕಾರ್ಯಕ್ರಮ ನಿರ್ವಹಿಸಿದರು.