ಕಟ್‌ಬೇಲ್ತೂರಿನಲ್ಲಿ ಹಿರಿಯರೆಡೆಗೆ ಸಾಹಿತ್ಯದ ನಡಿಗೆ
ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ಮತ್ತು ಜನಜೀವನದ ಅರಿವು ಮತ್ತು ಅಭಿಮಾನದಿಂದ ಮಾತ್ರ ನಾಡು ನುಡಿ ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಮುಂದಿನ ತಲೆಮಾರು ಹೆಮ್ಮೆಪಡುವಂತಹ ಪರಂಪರೆಯನ್ನು ರೂಪಿಸುವ ಹೊಣೆ ಎಲ್ಲ ಕನ್ನಡಿಗರ ಮೇಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲೂಕು ಘಟಕ, ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ ಇವರ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ನವೆಂಬರ್ ತಿಂಗಳುಪೂರ್ತಿ ನಡೆಯುವ ತಿಂಗಳ ಸಡಗರದ ಅಂಗವಾಗಿ ಕಸಾಪ ವಂಡ್ಸೆ ಹೋಬಳಿ ಘಟಕ ಆಶ್ರಯದಲ್ಲಿ ಕಟ್‌ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದಲ್ಲಿ ಗುರುವಾರ ಸಂಜೆ ಜರುಗಿದ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಆಶಯಕ್ಕನುಗುಣವಾಗಿ ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ಶನಿಕಥಾ ದಾಸರಾದ ಕಟ್‌ಬೇಲ್ತೂರು ಶಂಕರ ಪೂಜಾರಿ ಅವರನ್ನು ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷರು ಸನ್ಮಾನಿಸಿದರು. ಮುಖ್ಯ ಅತಿಥಿ ಶ್ರೀ ಭದ್ರಮಹಾಕಾಳಿ ದೈವಸ್ಥಾನದ ಆಡಳಿತ ಮೊಕ್ತೇಸರ ಬಿ. ಹೆರಿಯಣ್ಣ ಶೆಟ್ಟಿ, ಆಡಳಿತ ಸಮಿತಿ ಅಧ್ಯಕ್ಷ ಕೆ. ಆನಂದ ಶೆಟ್ಟಿ, ಉಪಾಧ್ಯಕ್ಷ ಬಿ. ಸೀತಾರಾಮ ಶೆಟ್ಟಿ, ವಂಡ್ಸೆ ಹೋಬಳಿ ಪದಾಧಿಕಾರಿಗಳಾದ ಕೆ. ರವಿಕುಮಾರ್, ದಿವಾಕರ್ ವಂಡ್ಸೆ ಮೊದಲಾದವರು ಉಪಸ್ಥಿತರಿದ್ದರು.
ಕಸಾಪ ವಂಡ್ಸೆ ಹೋಬಳಿ ಘಟಕಾಧ್ಯಕ್ಷ ಚಂದ್ರ ಕೆ. ಹೆಮ್ಮಾಡಿ ಸ್ವಾಗತಿಸಿದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಡಾ. ಕಿಶೋರ್‌ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಂಡ್ಸೆ ಹೋಬಳಿ ಗೌರವ ಕಾರ್ಯದರ್ಶಿ ಜಗದೀಶ್ ದೇವಾಡಿಗ ಮುಳ್ಳಿಕಟ್ಟೆ ಸನ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಹನಾ ಶುಭಕರ್ ದೇವಲ್ಕುಂದ ವಂದಿಸಿದರು.