Kundapra.com ಕುಂದಾಪ್ರ ಡಾಟ್ ಕಾಂ

ಜಿ.ಎಲ್.ಎನ್ ಸಿಂಹರಿಗೆ ಆಳ್ವಾಸ್ ಚಿತ್ರಸಿರಿ ಪ್ರಶಸ್ತಿ

ಮೂಡುಬಿದಿರೆ: 2016ನೇ ಸಾಲಿನ ಆಳ್ವಾಸ್ ಚಿತ್ರಸಿರಿ ಪ್ರಶಸ್ತಿಗೆ ಮೈಸೂರಿನ ಹಿರಿಯ ಚಿತ್ರಕಲಾವಿದ ಜಿ.ಎಲ್.ಎನ್ ಸಿಂಹ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 25ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದ್ದು ನ. 13ರಂದು ನಡೆಯಲಿರುವ ಆಳ್ವಾಸ್ ಚಿತ್ರಸಿರಿಯ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ. ಎಂ.ಮೋಹನ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಲವು ಪತ್ರಿಕೆಗಳಲ್ಲಿ ಚಿತ್ರಕಲಾವಿದರಾಗಿ ಸೇವೆ ಸಲ್ಲಿಸಿದ ಸಿಂಹ ಅವರು ಕಲಾಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಸರಣಿಚಿತ್ರಗಳು, ಶ್ರೀಸೂಕ್ತ, ಪುರುಷಸೂಕ್ತ, ವಾಗಂಭೃಣೀಸೂಕ್ತ, ರುದ್ರಾಧ್ಯಾಯ, ಕಾಳಿಕಾ ಪುರಾಣ, ದಶಮಹಾವಿದ್ಯಾ, ಗಣೇಶಪುರಾಣ, ಮತ್ತು ಗೀತಗೋವಿಂದದ ದಶಾವತಾರ ಹೀಗೆ ಅತ್ಯಮೂಲ್ಯ ಕೃತಿಗಳು ಅವರ ಕೈಯಿಂದ ಮೂಡಿವೆ. ಇಲ್ಲಿಯ ತನಕ ಕೇವಲ ಶ್ರವಣ ಮಾಧ್ಯಮದಲ್ಲಿದ್ದ ಶ್ಲೋಕಗಳು ಅನ್ಯಾದೃಶ ಚಿಂತನೆಗಳುಳ್ಳ ಚಿತ್ರಗಳ ಮುಖಾಂತರ ಎಲ್ಲರ ಮನದಾಳಕ್ಕೆ ಇಳಿಯುವಲ್ಲಿ ಇವರ ಕಲಾಕೃತಿಗಳು ಮಹತ್ವವಾದ ಪಾತ್ರವಹಿಸಿದೆ.

ಬಹುತೇಕ ಧ್ಯಾನಶ್ಲೋಕಗಳನ್ನು ಆಧರಿಸಿ ಬಿಡಿಬಿಡಿಯಾಗಿ ದೇವೀ ದೇವತೆಗಳ ಚಿತ್ರಗಳನ್ನು ರಚಿಸಿದ್ದಾರೆ. ಲೌಖಿಕ ವಿಷಯಗಳನ್ನು ಆಧರಿಸಿಯೂ ಚಿತ್ರಗಳನ್ನು ರಚಿಸಿದ್ದಾರೆ. ಇವರ ಕಲಾಕೃತಿಗಳು ಹಲವಾರು ಪ್ರತಿಷ್ಠಿತ ಕಲಾಗ್ಯಾಲರಿಗಳಲ್ಲಿ ಸಂಗ್ರಹಗೊಂಡಿವೆ.

Exit mobile version