Kundapra.com ಕುಂದಾಪ್ರ ಡಾಟ್ ಕಾಂ

ಗೋಪಾಡಿ: ಹಾಡಹಗಲೇ ಮಹಿಳೆಯ ಭೀಕರ ಕೊಲೆ

 

 

 

 

 

 

 

 

 

 

 

 

 

 

 

 

 

ಕುಂದಾಪುರ: ತಾಲೂಕಿನ ಹಾಡ ಹಗಲೇ ಮನೆಯಲ್ಲಿ ತನ್ನ 4 ವರ್ಷದ ಮಗುವಿನೊಂದಿಗಿದ್ದ ಬಸುರಿ ಮಹಿಳೆಯನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಗೋಪಾಡಿ ಬೀಚ್ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ. ಮಹಿಳೆಯನ್ನು ಅತ್ಯಾಚಾರ ಯತ್ನಿಸಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಗೋಪಾಡಿಯ ಬೀಚ್ ರಸ್ತೆ ಒಂಟಿ ಮನೆಯ ನಿವಾಸಿ ಆರೂವರೆ ತಿಂಗಳ ಗರ್ಭಿಣಿ ಇಂದಿರಾ ಮೊಗವೀರ(೩೦) ಎಂಬಾಕೆಯೇ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ಮಹಿಳೆ. ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಯ ಹೆಸರನ್ನು ತನಿಖೆಯ ಕಾರಣದಿಂದ ಪೊಲೀಸರು ಬಹಿರಂಗಗೊಳಿಸಿಲ್ಲ.

ಘಟನೆಯ ವಿವರ: ಬೀಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಾಡಿ ಎಂಬಲ್ಲಿ ಬೀಚ್ ರಸ್ತೆಯಲ್ಲಿ ಸಮುದ್ರ ಸಮೀಪವಿರುವ ಲಿಂಗಜ್ಜನ ಮನೆ ಎಂಬ ಒಂಟಿ ಮನೆಯಲ್ಲಿ ಕೊಲೆಗೀಡಾದ ಇಂದಿರಾ ಮೊಗವೀರ ವಾಸಿಸುತ್ತಿದ್ದರು. ಈಕೆಗೆ ಐದು ವರ್ಷಗಳ ಹಿಂದೆ ವಿವಾಹವಾಗಿದ್ದು, ಎರಡೂವರೆ ವರ್ಷ ಪ್ರಾಯದ ಗಂಡು ಮಗುವಿದೆ. ಈಕೆಯ ಗಂಡ ಮಲ್ಪೆಯಲ್ಲಿ ಮೀನುಗಾರಿಕೆ ಮಾಡಿಕೊಂಡಿದ್ದು, ವಾರ, ತಿಂಗಳಿಗೊಮ್ಮೆ ಬರುತ್ತಿದ್ದನೆನ್ನಲಾಗಿದೆ. ಇಂದಿರಾಳ ಅಕ್ಕ ಗಿರಿಜಾ ಹಾಗೂ ಆಕೆಯ ಮಗಳು ಪ್ರತಿಮಾ ಒಟ್ಟು ನಾಲ್ಕು ಜನ ಮನೆಯಲ್ಲಿ ವಾಸವಾಗಿದ್ದರು.

ಶನಿವಾರ ಸಂಜೆ ಸುಮಾರು ನಾಲ್ಕು ಗಂಟೆಯ ಸುಮಾರಿಗೆ ಗಿರಿಜಾ ಹಾಗೂ ಪ್ರತಿಮಾ ಸಮೀಪದ ಗೇರು ಹಾಡಿಯಲ್ಲಿ ಗೇರು ಬೀಜ ಹೆಕ್ಕಲೆಂದು ಹಾಡಿಗೆ ಹೋಗಿದ್ದರು. ಇಂದಿರಾಳ ಮಗ ಮನೆಯೊಳಗೆ ನಿದ್ದೆ ಮಾಡುತ್ತಿದ್ದ ಸಂದರ್ಭ ಮನೆಯ ಎದುರಿನ ಅಂಗಳಕ್ಕೆ ತಾಗಿಕೊಂಡಿರುವ ಕೊಟ್ಟಿಗೆಯಲ್ಲಿ ಕಟ್ಟಿಗೆ ಹೊಂದಿಸಲು ಇಂದಿರಾ ಹೋಗಿದ್ದರೆನ್ನಲಾಗಿದೆ. ಇದೇ ಸಂದರ್ಭ ಅಪರಿಚಿತ ಕೊಟ್ಟಿಗೆಗೆ ನುಗ್ಗಿ ಆಕೆಯನ್ನು ಅತ್ಯಾಚಾರಗೈದು ನಂತರ ಆಕೆಯ ತಲೆಗೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಲಾಗಿದೆ. ಇದೇ ಸಂದರ್ಭ ಮನೆ ಸಮೀಪ ಇನ್ನೊಂದು ಮನೆಯ ಮಹಿಳೆಯೊಬ್ಬರು ಬಂದುದ್ದನ್ನು ಗಮನಿಸಿದ ಆರೋಪಿಗಳು ಅಲ್ಲಿಂದ ಪಲಾಯನಗೈದಿದ್ದು, ಆರೋಪಿ ಎನ್ನಲಾದ ವ್ಯಕ್ತಿಯನ್ನು ಆಕೆ ಗುರುತಿಸಿದ್ದಾರೆ ಎಂದು ತಿಳಿದು ಬಂದಿದೆ. ಮೃತ ದೇಹವನ್ನು ಕುಂದಾಪುರ ಸರ್ಕಾರೀ ಆಸ್ಪತ್ರೆಗೆ ಸಾಗಿಸಿ ನಂತರ ಮರಣೋತ್ತರ ಶವ ಪರೀಕ್ಷೆಗಾಗಿ ಮಣಿಪಾಲಕ್ಕೆ ಕೊಂಡೊಯ್ಯಲಾಗಿದೆ.

ಶಂಕಾಸ್ಪದ ಮೈಮೇಲೆ ರಕ್ತದ ಕಲೆ: ಮೈತುಂಬಾ ರಕ್ತ ಮೆತ್ತಿಸಿಕೊಂಡು ಓಡುತ್ತಿದ್ದ ವ್ಯಕ್ತಿಯನ್ನು ಕಂಡ ಸ್ಥಳೀಯರು ತಕ್ಷಣ ಗೋಪಾಡಿ ಗಸ್ತು ಸಿಬ್ಬಂದಿ ವೆಂಕಟರಮಣ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವತ್ತರಾದ ಅವರು ಆತನನ್ನು ಬೆನ್ನಟ್ಟಿ ವಶಕ್ಕೆ ತೆಗೆದುಕೊಂಡಿದ್ದಾರೆ. ವಿಪರೀತ ಮದ್ಯಸೇವಿಸಿದ್ದ ಈತನನ್ನು ಪ್ರಶಾಂತ್ ಮೊಗವೀರ ಎಂದು ಗುರುತಿಸಲಾಗಿದೆ. ಕ್ರಿಮಿನಲ್ ಮನಸ್ಥಿತಿಯ ಈತ ಕೆಲವು ದಿನಗಳ ಹಿಂದಷ್ಟೇ ಜೆಲುವಾಸದಿಂದ ಹೊರಗಡೆ ಬಂದವ. ಕತ್ಯದ ಹಿಂದೆ ಈತನ ಪಾತ್ರವಿದೆಯೇ ಅಥವಾ ಬೇರೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ಕೂಲಂಕಶ ತನಿಖೆ ಮುಂದುವರಿದಿದೆ. ‘ವಶಕ್ಕೆ ಪಡೆದುಕೊಂಡ ಈತನನ್ನು ವೆದ್ಯಕೀಯ ತಪಾಸಣೆಗೊಳಪಡಿಸಲಾಗಿದೆ. ಮೇಲ್ನೋಟಕ್ಕೆ ಮಹಿಳೆಯ ಅತ್ಯಾಚಾರ ಮಾಡಿ ಹತ್ಯೆಗೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮತ ಮಹಿಳೆಯ ಮರಣೋತ್ತರ ಪರೀಕ್ಷೆಯ ಬಳಿಕ ವಾಸ್ತವ ಧಡಪಡಲಿದೆ. ತನಿಖೆ ಚುರುಕುಗೊಳಿಸಿದ್ದೇವೆ. ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಹೇಳಿದ್ದಾರೆ.

ಮೂಲಭೂತ ಸೌಕರ್ಯ ಇಲ್ಲ: ಬೀಜಾಡಿ ಪ್ರವಾಸಿ ತಾಣವಾಗಿದ್ದು, ಕಡಲ ತೀರದಲ್ಲಿಯೇ ಇರುವ ಈ ಮನೆಯಲ್ಲಿ ಮೂಲ ಭೂತ ಸೌಕರ್ಯವಾದ ವಿದ್ಯುತ್ ಸಂಪರ್ಕವೇ ಇಲ್ಲ. ಇದರಿಂದಾಗಿ ಪೊಲೀಸರು ಎಫ್‌ಐಆರ್ ದಾಖಲಿಸಲು ಚಿಮಿಣಿ ದೀಪವನ್ನೇ ಅವಲಂಭಿಸಬೇಕಾಯಿತು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಗಣಪತಿ ಟಿ. ಶ್ರೀಯಾನ್, ಪ್ರತೀ ಮನೆಗೂ ಮೂಲಭೂತ ಸೌಕರ್ಯ ಒದಗಿಸುವುದು ಸರ್ಕಾರ ಹಾಗೂ ಇಲಾಖೆಯ ಕರ್ತವ್ಯ. ಆದರೆ ಸಿಆರ್‌ಝೆಡ್ ನೆಪವಾಗಿಟ್ಟುಕೊಂಡು ಮೂಲಭೂತ ಸೌಕರ್ಯ ವಂಚಿಸುವುದು ಎಷ್ಟು ಸರಿ ಎಂದು ಇಲಾಖೆ ಹಾಗೂ ಸರ್ಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ.

ಮುಗಿಲುಮುಟ್ಟಿದ ಆಕ್ರಂದನ: 3 ತಿಂಗಳ ಹಿಂದಷ್ಟೇ ಈ ಮನೆಯಲ್ಲಿ ದುರಂತ ಸಂಭವಿಸಿತ್ತು. ಮನೆಗೆ ಆಧಾರವಾಗಿದ್ದ ಮಂಜುನಾಥ್ ಎಂಬವರು ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದರು. ಇಂದಿರಾ ಅವರ ಅಕ್ಕ ಗಿರಿಜಾ ಅವರ ಮಗನಾಗಿರುವ ಈತ ಮನೆಗೆ ಆಧಾರಸ್ತಂಭವಾಗಿದ್ದರು. ಇದರ ಬೆನ್ನಲ್ಲೇ ಈ ದುರ್ಘಟನೆ ನಡೆದಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಇಂದಿರಾರ ಸಹೋದರರಿಬ್ಬರು ಪ್ರಜ್ಞಾಶೂನ್ಯರಾಗಿ ನೆಲಕ್ಕೆ ಬಿದ್ದ ದೃಶ್ಯ ಕಂಡು ಬಂತು.

ಪುಟ್ಟ ಮಗುವಿನ ಅಳು ಕರುಳು ಹಿಂಡುತ್ತಿದೆ!: ಜಗತ್ತನ್ನು ಅರಿಯದ ಪುಟ್ಟ ಮಗು ಅನ್ವಿತ್(4) ತನ್ನ ತಾಯಿಗೆ ಏನಾಗಿದೆ ಎಂಬ ಅರಿವಿಲ್ಲದೆ ಹಿರಿಯರು ಅಳುವುದನ್ನು ಕಂಡು ತಾನು ಅಳುತ್ತಿದ್ದ. ಈ ದಶ್ಯ ಕಂಡ ಹಲವರು ಕಣ್ಣೀರು ಗರೆದರು. ಅಲ್ಲಿ ಕರುಳು ಹಿಂಡುವ ನೋಟವಿತ್ತು. ಘಟನೆ ಸಂಭವಿಸಿರುವ ಮನೆ ಕಡಲತಡಿಯಲ್ಲಿದ್ದರೂ ಅರ್ಧ ಫರ್ಲಾಂಗು ಸುತ್ತಮುತ್ತ ಮನೆಯಿಲ್ಲ. ದಟ್ಟ ಗಾಳಿಗೋಪು ಆವರಿಸಿಕೊಂಡಿದೆ. ದುಷ್ಕರ್ಮಿಗಳು ಇದರ ಲಾಭವೆತ್ತಿ ಒಂಟಿ ಮಹಿಳೆಯ ಬಲಿ ಪಡೆದುಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ಹಾಜರಿದ್ದರು. ಉಡುಪಿಯ ಅಪರಾಧ ಪತ್ತೆದಳ ಇಲಾಖೆಯಿಂದ ಶ್ವಾನ ದಳ ಕರೆಯಿಸಲಾಗಿದ್ದು ಪರಿಶೀಲನೆ ನಡೆಸಲಾಗಿದ್ದು, ತನಿಖೆ ಮುಂದುವರೆದಿದೆ.

ಆರೋಪಿಗಳನ್ನು ಶೀಘ್ರ ಬಂಧಿಸಿ: ಕರಾವಳಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಅತ್ಯಾಚಾರ, ಕೊಲೆ ಪ್ರಕರಣಗಳ ಜೊತೆಗೆ ಹಲವು ನಿಗೂಢ ಸಾವು ಪ್ರಕರಣಗಳು ಸಂಭವಿಸುತ್ತಿದ್ದು, ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ. ಅಲ್ಲದೇ ಇಂದಿರಾ ಕೊಲೆಗೆ ಸಂಬಂಧಿಸಿದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ಇಲ್ಲದಿದ್ದರೆ ಡಿವೈಎಫ್‌ಐ ಸಂಘಟನೆ ಉಗ್ರ ಹೋರಾಟ ನಡೆಸುತ್ತದೆ ಎಂದು ಡಿವೈಎಫ್‌ಐ ಸಂಘಟನೆಯ ಮುಖಂಡ ಸತೀಶ್ ಕುಮಾರ್ ತೆಕ್ಕಟ್ಟೆ ಆಗ್ರಹಿಸಿದ್ದಾರೆ.

Exit mobile version