ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿ-2016 ನಾಡು ನುಡಿಯ ಸಮ್ಮೇಳನಕ್ಕೆ ಪೂರಕವಾಗಿ ನ.17ರಿಂದ 20ರವರೆಗೆ ಕೃಷಿ ಸಿರಿ ನಡೆಯಲಿದೆ. ಹಲವಾರು ವೈವಿಧ್ಯತೆಗಳೊಂದಿಗೆ ಮೂಡಿಬರಲಿದೆ ಎಂದು ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
150 ಮಳಿಗೆಗಳಿಗೆ ಉಚಿತ ವ್ಯವಸ್ಥೆ:
ಕೃಷಿ ಸಂಬಂಧಿ ಪರಿಕರಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯೂ ಈ ಕೃಷಿ ಉತ್ಸವದಲ್ಲಿದ್ದು ಈಗಾಗಲೇ 150ಕ್ಕೂ ಮಿಕ್ಕಿ ರಾಜ್ಯಮಟ್ಟದ ಕೃಷಿ ಮಳಿಗೆಗಳು ಹೆಸರು ನೋಂದಾಯಿಸಿಕೊಂಡಿವೆ. ತಂತ್ರಜ್ಞಾನಾಧಾರಿತ ಆಧುನಿಕ ಕೃಷಿ ಉಪಕರಣಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದು ಗ್ರಾಮೀಣ ಭಾಗದ ಕೃಷಿಕರಿಗೆ ಆಧುನಿಕತೆಯ ಪರಿಚಯ ಮಾಡಿಕೊಡುವುದು ಮಾತ್ರವಲ್ಲ ಕೃಷಿಕರ ಅಗತ್ಯತೆಗಳನ್ನು ಪೂರೈಸುವಲ್ಲಿಯೂ ಈ ಕೃಷಿಸಿರಿ ಪ್ರಯತ್ನಿಸಲಿದೆ. ಕೃಷಿ ಸಂಸ್ಕೃತಿಯಿಂದ ದೂರವಿರುವ ಆಧುನಿಕ ಯುವ ಪೀಳಿಗೆಗೆ ಆಹಾರ ಸಂಸ್ಕೃತಿಯನ್ನು ಪರಿಚಯಿಸುವುದು ಮಾತ್ರವಲ್ಲ ಅವರ ಜ್ಞಾನದ ಪರಿಧಿಯನ್ನು ವಿಸ್ತರಿಸುವಲ್ಲಿಯೂ ಸಹಕಾರಿಯಾಗಲಿದೆ.
ಕೃಷಿ ಉಪಕರಣ, ಕೃಷಿ ಪರಿಕರ ಹಾಗೂ ಆಹಾರೋತ್ಪನ್ನಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತು ಮಾರಾಟಗಳು ನಡೆಯಲಿದ್ದು ಮಳಿಗೆದಾರರಿಗೆ ಮಳಿಗೆಯು ಉಚಿತವಾಗಿದೆ ಹಾಗೂ ಮಳಿಗೆದಾರರ ತಂಡಕ್ಕೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದೇಸೀ ಕೃಷಿ ಸಂಸ್ಕೃತಿಯನ್ನು ಪರಿಚಯಿಸುವ ಕಿರು ಪ್ರಯತ್ನವಾಗಿದ್ದು ನ.17ರಂದು 5:00 ಗಂಟೆಗೆ ಪ್ರಗತಿಪರ ಕೃಷಿಕ, ತನ್ನ 97ರ ಹರೆಯದಲ್ಲೂ ಕೃಷಿಯನ್ನೇ ಮೆಚ್ಚಿಕೊಂಡಿರುವ ಮಿಜಾರುಗುತ್ತು ಆನಂದ ಆಳ್ವರು ಕೃಷಿಸಿರಿಯನ್ನು ಉದ್ಘಾಟಿಸಲಿದ್ದಾರೆ.
ಮಿಜಾರು ಅಣ್ಣಪ್ಪ, ಶಿರ್ತಾಡಿ ಧರ್ಮಸಾಮ್ರಾಜ್ಯ ನೆನಪು:
ಪ್ರಗತಿಪರ ಕೃಷಿಕರಾಗಿ ಎಸ್.ಡಿ. ಸಾಮ್ರಾಜ್ಯರೆಂದೇ ಖ್ಯಾತರಾದ ಸನ್ಮಾನ್ಯ ಶಿರ್ತಾಡಿ ಧರ್ಮಸಾಮ್ರಾಜ್ಯರ ಹೆಸರನ್ನು ಆಳ್ವ್ವಾಸ್ ಕೃಷಿಸಿರಿ ನಡೆಯುವ ಆವರಣಕ್ಕೆ ನಾಮಕರಣ ಮಾಡಲಾಗಿದೆ. ಈ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ವೇದಿಕೆಯಲ್ಲಿದ್ದು, ಅಲ್ಲಿ ಯಕ್ಷಗಾನದ ಪ್ರದರ್ಶನಗಳು ನಡೆಯಲಿವೆ. ಯಕ್ಷಗಾನ ಹಾಸ್ಯದ ಮೇರು ನಟ, ಹಾಸ್ಯ ಚಕ್ರವರ್ತಿ ಮಿಜಾರು ಅಣ್ಣಪ್ಪನವರ ಹೆಸರಿನಲ್ಲಿ ಈ ವೇದಿಕೆ ಇದೆ.
ಕೃಷಿಸಿರಿಯ ಆಕರ್ಷಣೆ:
ನವೆಂಬರ್ 19ರಂದು 2.30ರಿಂದ 5.30ವರೆಗೆ 20ಕ್ಕಿಂತಲೂ ಮಿಕ್ಕಿದ ವಿವಿಧ ತಳಿಗಳ 100ಕ್ಕೂ ಮಿಕ್ಕಿದ ಆಕರ್ಷಕ ಶ್ವಾನಗಳ ಪ್ರದರ್ಶನವಿದೆ. 60ಕ್ಕೂ ಮಿಕ್ಕಿ ವಿವಿಧ ಗಾತ್ರದ ವಿವಿಧ ಜಾತಿಯ ವಿವಿಧ ಬಣ್ಣಗಳ ಮೀನುಗಳ ಬೃಹತ್ ಮತ್ಸ್ಯಾಲಯ (ಅಕ್ವೇರಿಯಂ), ತುಂಬಿದ ನೀರಿನಲ್ಲಿ ವಿವಿಧ ಮೀನುಗಳ ಚೆಲ್ಲಾಟ ಹಾಗೂ ವರ್ಣರಂಜಿತ ಕಾರಂಜಿ ಕಣ್ತುಂಬಿಸಿಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ. ವಿವಿಧ ಜಾತಿ, ಗಾತ್ರಗಳ ಆಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯಿದೆ.
ಕೃಷಿ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ಆಲ್ವಿನ್ ಮೆನೇಜಸ್, ಕಾರ್ಯದರ್ಶಿ ಜಿನೇಂದ್ರ ಜೈನ್, ಜೊತೆ ಕಾರ್ಯದರ್ಶಿ ಸುಜಾತ ರಮೇಶ್, ಕೊಶಾಧಿಕಾರಿ ಅಲ್ವಿನ್ ಮೆನೇಜಸ್, ಪ್ರಗತಿಪರ ಕೃಷಿ ಪಿ.ಕೆ ರಾಜು ಪೂಜಾರಿ, ಅಂಡಾರು ಗುಣಪಾಲ ಹೆಗ್ಡೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೃಷ್ಣ ಟಿ. ಸುದ್ದಿಗೋಷ್ಠಿಯಲ್ಲಿದ್ದರು.