Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಸ್ವಾವಲಂಬಿ ಬದುಕು

?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅನೇಕ ಜನರಿಗೆ ವರ್ಷದಲ್ಲಿ ಕನಿಷ್ಠ ೧೦೦ ದಿನ ಉದ್ಯೋಗ ನೀಡಲು ಸರಕಾರ ಮುಂದಾಗಿರುವುದರಿಂದ ಜನರು ಸ್ವಾವಲಂಬಿ ಜೀವನ ನಡೆಸಲು ಸಹಾಯಕವಾಗಿದೆ. ಜನರು ಈ ಯೋಜನೆಯಡಿ ಹೆಸರನ್ನು ನೊಂದಾಯಿಸಿಕೊಂಡು ಈ ಯೋಜನೆ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು. ಈ ಯೋಜನೆಯಡಿ ನೀಡಲಾಗುತ್ತಿರುವ ಕೂಲಿ ಹಣವನ್ನು ಹೆಚ್ಚಿಸಲು ಸಂಬಂಧಪಟ್ಟ ಇಲಾಖೆಯ ಮೇಲೆ ಒತ್ತಡ ಹೇರಲು ಪ್ರಯತ್ನಿಸುವುದಾಗಿ ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್ ಹೇಳಿದರು.

ಅವರು ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ೨೦೧೭-೧೮ನೇ ಸಾಲಿನ ಕಾರ್ಮಿಕ ಆಯ-ವ್ಯಯವನ್ನು ತಯಾರಿಸುವ ಬಗ್ಗೆ ಜರುಗಿದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಗ್ರಾಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಯಶಸ್ಸಿಗಾಗಿ ಗ್ರಾಮದಲ್ಲಿ ವಾರ್ಡ್‌ಸಭೆ ಮತ್ತು ಗ್ರಾಮಸಭೆಯನ್ನು ಆಯೋಜಿಸಿ ಜನರಿಂದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಜನಾರ್ದನ್ ಮಾರ್ಗದರ್ಶಿ ಅಧಿಕಾರಿಯಾಗಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಧವ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿ ಶೇಖರ್ ಜಿ. ಕಾರ್ಯಕ್ರಮ ನಿರೂಪಿಸಿದರು.

Exit mobile version