Site icon Kundapra.com ಕುಂದಾಪ್ರ ಡಾಟ್ ಕಾಂ

ಸುತ್ತಿಗೆಯಿಂದ ಹೊಡೆದು ಕೊಲೆ

ಉಡುಪಿ: ಕುಡಿತದ ಚಟವಿದ್ದ ಇಬ್ಬರು ಸ್ನೇಹಿತರ ನಡುವೆ ವಿವಾದ ಉಂಟಾಗಿ ಒಬ್ಬಾತ ಸುತ್ತಿಗೆಯಿಂದ ಹೊಡೆದ ಪರಿಣಾಮ ಇನ್ನೊಬ್ಬ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ.

ಉದ್ಯಾವರ ಬೊಳ್ಜೆ ಮಾಧವ ತಿಂಗಳಾಯ (65) ಮೃತಪಟ್ಟವರು. ಹೆಂಡತಿ ಮತ್ತು ನಾಲ್ವರು ಮಕ್ಕಳಿದ್ದರೂ ಕುಡಿತದಿಂದಾಗಿ ಮಾಧವ ತಿಂಗಳಾಯ ಮನೆಗೆ ಹೋಗುತ್ತಿರಲಿಲ್ಲ. ಗುಜರಿ ಮಾರಾಟ ಮಾಡುತ್ತಾ ದಿನ ಕಳೆಯುತ್ತಿದ್ದರು ಎನ್ನಲಾಗಿದೆ.

ಕಳೆದ ಮೂರು ತಿಂಗಳಿಂದ ಮಾಧವ ತಿಂಗಳಾಯ ಮತ್ತು ಅವರಿಗೆ ಪರಿಚಿತನಾದ ಶೇಖರಪ್ಪ (70) ಎಂಬಾತನ ಜತೆಗೆ ಮಲ್ಪೆಯಲ್ಲಿ ತಿರುಗಾಡುತ್ತಾ, ಮೀನುಗಾರಿಕೆ ಇಲಾಖೆಗೆ ಸೇರಿದ ಒಣಗಿದ ಮೀನು ಇಡುವ ಶೆಡ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಶನಿವಾರ ರಾತ್ರಿ ಕೂಡಾ ಈ ಇಬ್ಬರು ಒಟ್ಟಿಗೆ ತಿರುಗಾಡುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆ. ಭಾನುವಾರ ಬೆಳಗ್ಗೆ ಸುಲೇಮಾನ್ ಎಂಬವರು ಶೆಡ್ ಸಮೀಪದಿಂದ ಬರುತ್ತಿದ್ದಾಗ ಅಪರಿಚಿತ ವ್ಯಕ್ತಿ ಮೃತಪಟ್ಟಿರುವುದು ಕಂಡಿದೆ. ಅವರು ಪಕ್ಕದ ಐಸ್‌ಪ್ಲಾಂಟ್‌ನ ಧರಣೇಂದ್ರ ಕುಮಾರ್‌ಗೆ ತಿಳಿಸಿದ್ದಾರೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಬಂದು ತನಿಖೆ ನಡೆಸಿದಾಗ ಮೃತಪಟ್ಟಿರುವುದು ಮಾಧವ ತಿಂಗಳಾಯ ಎಂಬುದು ಗೊತ್ತಾಗಿದ್ದು, ಅವರ ತಲೆಗೆ ಏಟು ಬಿದ್ದಿದೆ. ಶವದ ಕಾಲಿನ ಪಕ್ಕದಲ್ಲಿ ಸುತ್ತಿಗೆಯೊಂದು ಬಿದ್ದಿದ್ದು, ಅದರಲ್ಲಿ ರಕ್ತದ ಕಲೆಗಳಿದ್ದು, ಅದರಲ್ಲಿಯೇ ಹೊಡೆದು ಕೊಂದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ರಾತ್ರಿ ಮಾಧವ ತಿಂಗಳಾಯ ಜತೆಗೆ ಇದ್ದ ಶೇಖರಪ್ಪ ಬೆಳಗ್ಗೆ ನಾಪತ್ತೆಯಾಗಿರುವುದು ಈ ಶಂಕೆಗೆ ಕಾರಣವಾಗಿದೆ. ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಈ ಕೃತ್ಯ ಎಸಗಿರಬೇಕು ಎಂದು ಶಂಕಿಸಲಾಗಿದೆ. ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೇಖರಪ್ಪನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆತ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವ ಎಂದು ಗೊತ್ತಾಗಿದೆ.

Exit mobile version