Kundapra.com ಕುಂದಾಪ್ರ ಡಾಟ್ ಕಾಂ

ಸಮಾನ, ಸರಳ, ಪ್ರಾಮಾಣಿಕ ಜಗತ್ತೇ ನಿಜವಾದ ನಾಳೆ: ಡಾ. ಜಯಂತ ಕಾಯ್ಕಿಣಿ

ನಾಡು ನುಡಿ ಸಂಸ್ಸೃತಿಯ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಇಂದು ತಂತ್ರಜ್ಞಾನದ ಹೊಡೆತಕ್ಕೆ ಸಿಕ್ಕು ನೇರ ಬದುಕಿನ ಸಂಪರ್ಕ ಕಡಿದುಕೊಂಡು ಮಾನಸಿಕ ಗುಲಾಮಗಿರಿಯಲ್ಲಿ ಬದುಕುತ್ತಿದ್ದೇವೆ. ತಂತ್ರಜ್ಞಾನವಾಗಲಿ, ಸಾಹಿತ್ಯವಾಗಲಿ ನಮ್ಮಲ್ಲಿನ ವೈಚಾರಿಕತೆಯನ್ನು ಎಚ್ಚರಿಸುವ ಕೆಲಸ ಮಾಡಿದರೇ ಮಾತ್ರ ಅದು ಯಶಸ್ವಿ ಸಂವಹನ ಮಾಧ್ಯಮವಾಗಿ ಉಳಿದುಕೊಳ್ಳುತ್ತದೆ ಎಂದು ಖ್ಯಾತ ಸಾಹಿತಿ ಡಾ. ಜಯಂತ ಗೌರಿಶ್ ಕಾಯ್ಕಿಣಿ ಹೇಳಿದರು.

ಅವರು ವಿದ್ಯಾಗಿರಿಯ ರತ್ಮಾಕರವರ್ಣಿ ವೇದಿಕೆಯಲ್ಲಿ ನಾಡು ನುಡಿ ಸಂಸ್ಸೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ೨೦೧೬ಕ್ಕೆ ಭತ್ತದ ತೆನೆಗೆ ಹಾಲೆರೆದು, ವ್ಯಾಸಪೀಠದಲ್ಲಿನ ಪುಸ್ತಕವನ್ನು ಬಿಡಿಸಿ ಚಾಲನೆ ನೀಡಿ ಅವರು ಮಾತನಾಡಿದರು. ಜಾತಿ ಮತ, ಭಾಷೆಯ ಎಲ್ಲೆ ಮೀರಿ ಎಲ್ಲರೂ ಒಂದೆಡೆ ಸೇರುವುದೇ ನಿಜವಾದ ಹಬ್ಬ. ನಾವು ಎಲ್ಲಿದ್ದೇವೆ ಎನ್ನುವ ಭೇದ ಬೇಡ. ಕನ್ನಡದ ದೋಣಿಯಲ್ಲಿ ಎಲ್ಲರೂ ಹುಟ್ಟು ಹಾಕಿ ಮುನ್ನಡೆಸುವುದಷ್ಟೇ ಮುಖ್ಯವಾದುದು ಎಂದರು.

ಸಮಾನ, ಸರಳ, ಪ್ರಾಮಾಣಿಕ ಜಗತ್ತೇ ನಿಜವಾದ ನಾಳೆ. ನಮ್ಮೊಳಗೆ ಪ್ರೀತಿ ಇದ್ದರೆ ಎಲ್ಲವೂ ಚಂದ ಎಲ್ಲವೂ ಸಹನೀಯ ಎಂದ ಅವರು ಅನಿರೀಕ್ಷಿತ, ಅನಾಮಿಕ ನಾಳೆಗಳ ಬಗೆಗಿರುವ ಏಕೈಕ ಭರವಸೆ ನಮ್ಮ ವಿದ್ಯಾರ್ಥಿಗಳು ಎಂದರು.

ಸಮ್ಮೇಳನಾಧ್ಯಕ್ಷೆ ಡಾ. ಬಿ.ಎನ್. ಸುಮಿತ್ರಾ ಬಾಯಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್, ಕರ್ನಾಟಕ ಜಾನಪದ ವಿವಿಯ ಕುಲಪತಿ ಡಾ. ಚಿನ್ನಪ್ಪ ಗೌಡ, ಶಾಸಕ ಕೆ. ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮೊದಲಾದವರು ಉಪಸ್ಥಿತರಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Exit mobile version