Kundapra.com ಕುಂದಾಪ್ರ ಡಾಟ್ ಕಾಂ

ಹೊಸಬಸ್ ನಿಲ್ದಾಣದ ಬಳಿಯ ಅಂಗಡಿ ತೆರವು, ಆಕ್ರೋಶ

ಕುಂದಾಪುರ: ನಗರದ ಹೊಸ ಬಸ್‌ನಿಲ್ದಾಣ ಬಳಿಯ ಫೆರಿರಸ್ತೆ ಪಕ್ಕದಲ್ಲಿದ್ದ ಎಸ್‌ಟಿಡಿ ಬೂತ್ ಹಾಗೂ ಅಂಗಡಿ ಕಟ್ಟಡವನ್ನು ಪುರಸಭೆ ಏಕಾಎಕಿ ನೆಲಸಮಗೊಳಿಸಿರುವುದುದನ್ನು ಸಾರ್ವಜನಿಕರು ಖಂಡಿಸಿದ್ದಾರೆ.

ಸರಕಾರಿ ಅರ್ಜಿಗಳ ಮಾರಾಟ, ಅರ್ಜಿ ಬರೆದುಕೊಡುವ ಕಾಯಕ ನಡೆಯುತ್ತಿದ್ದ ಅಂಗಡಿಯನ್ನು ಬೆಳಗ್ಗಿನ ಜಾವ ನೆಲಸಮಗೊಳಿಸಿದ್ದು ಎಂದಿನಂತೆ ಅಂಗಡಿಗೆ ಬಂದ ಮಾಲೀಕರು ಅಂಗಡಿ ಮಾಯವಾಗಿರುವುದು ಕಂಡು ಹೌಹಾರಿದ್ದಲ್ಲದೆ ಕಣ್ಣೀರುಗರೆದರು. ಮಾಲೀಕನ ಅವಸ್ಥೆ ಕಂಡು ಆಕ್ರೋಶಿತರಾದ ನಾಗರಿಕರು ಪುರಸಭೆ ಕ್ರಮವನ್ನು ಖಂಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅಂಗಡಿ ಮಾಲೀಕ ನಾಗೇಶ್ ಕಾಮತ್, ಮೊದಲು ಪುರಸಭೆ ಅಂಗಡಿ ದೊಡ್ಡದಾಗಿದೆ ಎಂದು ತಿಳಿಸಿದ್ದ ಮೇರೆಗೆ ಚಿಕ್ಕದಾಗಿ ರೂಪಿಸಲು ಕೆಲಸ ಶುರುಹಚ್ಚಿಕೊಂಡಿದ್ದೆ. ಅಂಗಡಿಯಲ್ಲಿ ಸರಕಾರಿ ಅರ್ಜಿಗಳ ಮಾರಾಟ, ಅದರೊಂದಿಗೆ ಉಚಿತವಾಗಿ ಗ್ರಾಮೀಣ ಜನರಿಗೆ ಅರ್ಜಿ ಬರೆದುಕೊಡುವ ಕೆಲಸ ಮಾಡಿಕೊಂಡು ಬಂದಿದ್ದೇನೆ. ಅಂಗಡಿಯ ಪರವಾನಗಿ ಹೊಂದಿರುವುದಲ್ಲದೆ ವಿದ್ಯುತ್ ಸಂಪರ್ಕವೂ ಇದೆ. ಪುರಸಭೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಅಂಗಡಿ ನೆಲಸಮಗೊಳಿಸುವ ಮೂಲಕ ಹೊಟ್ಟೆಯ ಮೇಲೆ ಹೊಡೆದಿದೆ. ಪುರಸಭೆ ಕ್ರಮ ಅತ್ಯಂತ ನೋವು ನೀಡಿದೆ. ಇದರ ವಿರುದ್ಧ ಕಾನೂನು ಸಮರ ನಡೆಸುವೆ ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಶೆಟ್ಟಿ, ತೆರವುಗೊಳಿಸಲಾದ ಕಟ್ಟಡ ಅಕ್ರಮ. ಪುರಸಭೆ ಸಭೆಯಲ್ಲಿ ತೆರವುಗೊಳಿಸುವ ಕುರಿತು ನಿರ್ಣಯ ಮಂಡನೆಯಾಗಿದೆ. ಸಂಬಂಧಿತರಿಗೆ ಖುದ್ದು ತೆರವುಗೊಳಿಸುವಂತೆ ಸೂಚನೆ ನೀಡಿದ್ದೆವು. ಅವರು ಸ್ಪಂದಿಸಲಿಲ್ಲ. ಕಾನೂನಿನಂತೆ ತೆರವು ಕಾರ್ಯ ನಡೆಸಿದ್ದೇವೆ. ಕುಂದಾಪುರದ ನಾನಾ ಕಡೆ ಅಕ್ರಮ ಗೂಡಂಗಡಿ ಹೆಚ್ಚುತ್ತಿರುವ ಬಗ್ಗೆ ವ್ಯಾಪಕ ದೂರುಗಳಿವೆ. ಮುಂದೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

Exit mobile version