Kundapra.com ಕುಂದಾಪ್ರ ಡಾಟ್ ಕಾಂ

ಸುಡುಗಾಡು ಸಿದ್ಧರ ಕೈಚಳಕದ ಮೋಡಿಯೇ ಬೆರಗು

ಕುಂದಾಪ್ರ ಡಾಟ್ ಕಾಂ ವರದಿ
ಮೂಡುಬಿದಿರೆ: ಗುರುವಿನ ಆಟ, ಮಂತ್ರದ ಆಟ, ಗಾಳಿಯ ಆಟ, ಸಿದ್ಧಪ್ಪನ ಆಟ. ಈ ಚಮತ್ಕಾರ ಆಟ ಶಿವನು ಬಲ್ಲನು ತಿಳಿಯಿರಿ? ಎನ್ನುತ್ತಾ ಸಣ್ಣ ಗುಂಡೊಂದನ್ನು ಕೈಯಲ್ಲಿ ಹಿಡಿದು ಗಾಳಿಯಲ್ಲಿ ತೇಲಿಸಿ ಗಣಪತಿ, ಆಂಜನೇಯ, ಶಿವಲಿಂಗ, ಬಸವಣ್ಣನ ಮೂರ್ತಿ ತೆಗೆದು ತೋರಿಸುತ್ತಿದ್ದರೆ ಜನ ನಿಬ್ಬೆರಗಾಗಿ ನೋಡುತ್ತಿದ್ದರು.

ಆಳ್ವಾಸ್ ನುಡಿಸಿರಿಗೆ ಆಗಮಿಸಿದ್ದ ಸುಡುಗಾಡು ಸಿದ್ಧರ ತಂಡ ಕ್ಯಾಂಪಸ್‌ನಲ್ಲಿ ನಡೆದು ಸಾಗುತ್ತಿದ್ದವರನ್ನು ಅವರತ್ತ ಸೆಳೆಯುತ್ತಾ, ತಮ್ಮ ಕೈಚಳಕ ತೋರುತ್ತಾ ಸುಡುಗಾಡು ಸಿದ್ಧರ ಕಲಾ ಪ್ರಕಾರಗಳನ್ನು ತೆರೆದಿಟ್ಟರು.

ಹೊಸಪೇಟೆಯ ಕಲಾವಿದ ವಿರೂಪಾಕ್ಷಪ್ಪ ಅವರು ಎಳೆಂಟು ಗೋಲಿಗಳನ್ನು ಒಂದೊಂದಾಗಿ ನುಂಗುತ್ತಿದ್ದರು. ಅದರ ಮಧ್ಯೆಯೇ ಜನರ ಗಮನ ಹಿಡಿದಿಟ್ಟುಕೊಳ್ಳಲು ಸುತ್ತ ಕುಳಿತ ಇತರೆ ಕಲಾವಿದರು ತಮ್ಮ ಜೋಳಿಗೆಗಳಿಂದ ಬರುತ್ತಿದ್ದ ‘ಕುಯ್ ಕುಯ್’ ಸದ್ದನ್ನು ಅಡಗಿಸುತ್ತಿದ್ದರು. ಬಳಿಕ ನುಂಗಿದ ಎಲ್ಲಾ ಗೋಲಿಗಳನ್ನು ಕಲಾವಿದ ಗಂಟಲಿನಿಂದ ವಾಪಸ್ ತೆಗೆದು ವೀಕ್ಷಕರನ್ನು ಅಚ್ಚರಿ ಪಡಿಸಿದರು.

ವಿರೂಪಾಕ್ಷಪ್ಪ ಅವರು ರಾಜ್ಯ ಪ್ರಶಸ್ತಿ ಪುರಸ್ಕೃತರು. ಬದುಕಿಗಾಗಿ ಹಿರಿಯರ ಬಳುವಳಿಯಾಗಿ ಬಂದ ಸುಡುಗಾಡು ಸಿದ್ಧರ ಕೈಚಳಕವನ್ನೇ ನಂಬಿದ್ದಾರೆ. ತಮ್ಮೊಂದಿಗೆ ಮಗ ಹಾಗೂ ಮೊಮ್ಮಗನನ್ನು ಕರೆದುಕೊಂಡು ಬಂದಿದ್ದ ಅವರು, ಹಿರಿಯರಿಂದ ಬಂದ ಕಲೆಯ ಬಗ್ಗೆ ತಮ್ಮ ಮುಂದಿನ ಪೀಳಿಗೆಗೆ ಆಸಕ್ತಿ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.

ಅನೇಕ ಜಾದು ಪ್ರದರ್ಶನ ನೋಡಿದ್ದೇನೆ. ಈ ಬಗೆಯ ಕೈಚಳಕ ನೋಡಿದ್ದು ಇದೇ ಮೊದಲು. ಕೇವಲ ಗ್ರಾಮೀಣ ಪರಿಕರಗಳನ್ನು ಬಳಸಿ, ಕೈಳಚದಿಂದ ಕಲೆಯ ಪ್ರದರ್ಶನ ನೀಡಿದ ಸುಡುಗಾಡು ಸಿದ್ಧರ ಕಲೆ ಹಾಗೂ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎನ್ನುತ್ತಾರೆ ಸಿದ್ಧರ ಕೈಚಳಕ ಕಲೆಯನ್ನು ವೀಕ್ಷಿಸಿದವರು.

_mg_2403

Exit mobile version