Kundapra.com ಕುಂದಾಪ್ರ ಡಾಟ್ ಕಾಂ

ಹತ್ಯೆಗೀಡಾದ ಗರ್ಭೀಣಿ ಮಹಿಳೆಯ ಮನೆಗೆ ಸಚಿವರ ಭೇಟಿ

ಕುಂದಾಪುರ: ಕಳೆದ ವಾರ ದುಷ್ಕರ್ಮಿಯಿಂದ ಹತ್ಯೆಗೀಡಾದ ಗೋಪಾಡಿ ಮಹಿಳೆ ಇಂದಿರಾ ಮೊಗವೀರ್ತಿಯವರ ಮನೆಗೆ ಮಂಗಳವಾರ ಅಪರಾಹ್ನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಅವರು ಮಾತನಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರು ಯಾವುದೇ ಮುಲಾಜಿಲ್ಲದೆ ಕ್ರಮ ನಿರ್ವಹಿಸುವಂತೆ ಆದೇಶಿಸಿದ್ದೇವೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕಾದರೆ ಸ್ಥಳೀಯರು, ಕುಟುಂಬ ವರ್ಗ ಸಹಕರಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ಬಾಲಕ ಅನ್ವಿತ್‌ನ ಶಿಕ್ಷಣದ ಜವಾಬ್ದಾರಿಯನ್ನು ಸರಕಾರ ವಹಿಸಿಕೊಳ್ಳಲಿದೆ. ಅಲ್ಲದೆ ಈ ಹಿಂದೆ ಮೀನುಗಾರಿಕೆ ವೇಳೆ ಸಾವನ್ನಪ್ಪಿರುವ ಕುಟುಂಬದ ಸದಸ್ಯರೊಬ್ಬರಿಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಅವರು ಭರವಸೆ ನೀಡಿದರು. ಸರಕಾರ ಸಂತ್ರಸ್ತ ಕುಟುಂಬದೊಂದಿಗೆ ಇರುತ್ತದೆ ಎಂದು ಸಾಂತ್ವನ ಹೇಳಿದರು. ಉಪಸ್ಥಿತರಿದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಟುಂಬ ವರ್ಗಕ್ಕೆ ಸಾಂತ್ವನ ತಿಳಿಸಿ ಸ್ಥಳದಲ್ಲೇ ತುರ್ತು ಪರಿಹಾರ ವಿತರಿಸಿದರು.

ಡಿವೆಎಸ್‌ಪಿ ಮಂಜುನಾಥ ಶೆಟ್ಟಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ ರಾಧಾದಾಸ್ ಕುಂಭಾಸಿ, ಕೋಟೇಶ್ವರ ಮೊಗವೀರ ಯುವ ಸಂಘಟನೆ ಗೌರವಾಧ್ಯಕ್ಷ ಸತೀಶ ಎಂ. ನಾಯ್ಕ, ಅಧ್ಯಕ್ಷ ಆಶೋಕ ತೆಕ್ಕಟ್ಟೆ, ಮೊಗವೀರ ಮುಖಂಡರಾದ ರಾಮ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಮೀನುಗಾರ ಮುಖಂಡ ಶೇಖರ ಚಾತ್ರಬೆಟ್ಟು, ಗಣೇಶ ಪುತ್ರನ್, ಭಜರಂಗದಳ ಕೋಟೇಶ್ವರ ಘಟಕದ ಸಂಚಾಲಕ ಸುರೇಂದ್ರ ಮಾರ್ಕೋಡು, ಬಜರಂಗದಳ ಗೋಪಾಡಿ ಸಂಚಾಲಕ ಗಿರೀಶ್ ಗೋಪಾಡಿ, ಉಪಸ್ಥಿತರಿದ್ದರು.

Exit mobile version