Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ತಾಲೂಕು ಮಟ್ಟದ ಇಕೋಕ್ಲಬ್‌ಗಳ ಸಮ್ಮೇಳನ ಸಮುದ್ರ 2016

ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯಿಂದ ನೆಮ್ಮದಿಯ ಬದುಕು : ಡಾ. ಭಾಸ್ಕರ ಆಚಾರ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಂದು ಪರಿಸರ ಆತಂಕದ ಸ್ಥಿತಿಯಲ್ಲಿದ್ದು, ಅದನ್ನು ಊಳಿಸಿ ಸಮದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ. ಆದುದರಿಂದ ಪರಿಸರ, ಜೀವ ವೈವಿಧ್ಯವನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬರು ಹೊತ್ತಾಗ ನೆಮ್ಮದಿಯ ಬದುಕು ಸಾಧ್ಯ ಎಂದು ಕೋಟೇಶ್ವರದ ಡಾ. ಎನ್. ಆರ್. ಆಚಾರ್ಯ ಮೆಮೋರಿಯಲ್ ಟ್ರಸ್ಟ್‌ನ ಮುಖ್ಯಸ್ಥರಾದ ಡಾ. ಭಾಸ್ಕರ ಆಚಾರ್ಯ ಹೇಳಿದರು.

ಅವರು ಫ್ಲೋರಾ ಎಂಡ್ ಫೌನಾ ಕ್ಲಬ್ ಕುಂದಾಪುರ, ಡಾ| ಎನ್. ಆರ್. ಆಚಾರ್ಯ ಮೆಮೋರಿಯಲ್ ಟ್ರಸ್ಟ್ ಕೋಟೇಶ್ವರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ ವಲಯದ ಆಶ್ರಯದಲ್ಲಿ ಕುಂದಾಪುರದ ಹೋಟೆಲ್ ಹರಿಪ್ರಸಾದ್‌ನ ಅಕ್ಷತಾ ಸಭಾಂಗಣದಲ್ಲಿ ನ.೨೬ರಂದು ನಡೆದ ಕುಂದಾಪುರ ತಾಲೂಕು ಮಟ್ಟದ ಇಕೋಕ್ಲಬ್‌ಗಳ ಸಮ್ಮೇಳನ ಸಮುದ್ರ ೨೦೧೬ ರಲ್ಲಿ ಡಾ| ಎನ್.ಆರ್. ಆಚಾರ್ಯ ಸ್ಮಾರಕ ಅತ್ಯುತ್ತಮ ಇಕೋ ಕ್ಲಬ್ ಪ್ರಶಸ್ತಿ ಪ್ರದಾನ ನೆರವೇರಿಸಿ ಸಮಾರೋಪ ಬಾಷಣ ಮಾಡಿದರು.

ಹತ್ತು ಹಲವು ರೀತಿಯಲ್ಲಿ ಪರಿಸರವನ್ನು ವಿರೂಪಗೊಳಿಸುತ್ತಿರುವುದರಿಂದ ಜೀವ ವೈವಿಧ್ಯಗಳು ಅಳಿವಂಚಿನಲ್ಲಿವೆ. ವಿಷಯುಕ್ತ ವಾತಾವರಣ, ಆಹಾರಗಳಿಂದ ಗುಬ್ಬಚ್ಚಿ, ರಣಹದ್ದುಗಳು ನಮ್ಮ ಪರಿಸರದಲ್ಲಿ ಕಾಣ ಸಿಗುವುದು ತೀರ ವಿರಳವಾಗಿದೆ. ಪರಿಸರ ಹಾನಿಯ ನಿರಂತರತೆ ಪ್ರಾಕೃತಿಕ ವಿಕೋಪಕ್ಕೆ ಮುನ್ನುಡಿಯಾಗಿ ಮನುಕುಲ ಅಪಾಯಕ್ಕೆ ಸಿಲುಕಬಹುದು ಹಾಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಕಾಳಜಿಯನ್ನು ಹೊಂದಿ ಸ್ವಸ್ಥ ಪರಿಸರ, ಸ್ವಸ್ಥ ಜೀವನದ ಪ್ರೇರಕ ಶಕ್ತಿಗಳಾಗಿರಿ ಎಂದವರು ನುಡಿದರು.

ಇದೇ ಸಂದರ್ಭದಲ್ಲಿ ಡಾ| ಎನ್.ಆರ್. ಆಚಾರ್ಯ ಸ್ಮಾರಕ ಅತ್ಯುತ್ತಮ ಇಕೋ ಕ್ಲಬ್ ಪ್ರಶಸ್ತಿಯನ್ನು ಬಸ್ರೂರಿನ ಸರಕಾರಿ ಪ್ರೌಢಶಾಲೆ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಕೆದೂರಿನ ಸರಕಾರಿ ಪ್ರೌಢಶಾಲೆ ಪಡೆದುಕೊಂಡರು. ಪರಿಸರ ಚಿತ್ರಕಲೆಯಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಇಂಗ್ಲೀಷ್ ಮೀಡಿಯಂ ಶಾಲೆಯ ಶಿಲ್ಪಾ ಪ್ರಥಮ, ಧೀರಜ್ ಡಿ. ಪಟೇಲ್ ದ್ವಿತೀಯ, ಪ್ರಬಂಧ ಸ್ಪರ್ಧೆಯಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಶಾಲೆಯ ವೈಷ್ಣವಿ ಪ್ರಥಮ, ಹಕ್ಲಾಡಿಯ ಕೆ.ಎಸ್.ಎಸ್. ಸರಕಾರಿ ಪ್ರೌಢಶಾಲೆಯ ವಿಖ್ಯಾತ್ ದ್ವಿತೀಯ, ರಸಪ್ರಶ್ನೆ ಸ್ಪರ್ಧೆಯಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಪ್ರೌಢಶಾಲೆ ಪ್ರಥಮ, ಬೈಂದೂರಿನ ಸರಕಾರಿ ಪ. ಪೂ. ಕಾಲೇಜು ದ್ವಿತೀಯ, ಕಿರು ಪ್ರಸಹಸನದಲ್ಲಿ ಗುಜ್ಜಾಡಿಯ ಭಾಸ್ಕರ ಪೈ ಪ್ರೌಢಶಾಲೆ ಪ್ರಥಮ, ಕೆದೂರಿನ ಸರಕಾರಿ ಪ್ರೌಢಶಾಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ವೇದಿಕೆಯಲ್ಲಿ ಕುಂದಾಪುರದ ಫ್ಲೋರಾ ಎಂಡ್ ಫೌನಾ ಕ್ಲಬ್‌ನ ಅಧ್ಯಕ್ಷ ಡಾ. ಎಚ್. ಎಸ್. ಮಲ್ಲಿ, ಉಪಾಧ್ಯಕ್ಷ ಪ್ರಶಾಂತ ತೋಳಾರ್, ಕಾರ್ಯದರ್ಶಿ ಎನ್. ಮೋಹನ ಆಚಾರ್ಯ, ಕೋಶಾಧಿಕಾರಿ ಕೆ. ನಾರಾಯಣ, ಸದಸ್ಯರಾದ ಡಾ. ಉತ್ತಮ್‌ಕುಮಾರ್ ಶೆಟ್ಟಿ, ವಸಂತ ಬಂಗೇರ, ಗಣೇಶ್ ಐತಾಳ್ ಇನ್ನಿತರರು ಉಪಸ್ಥಿತರಿದ್ದರು. ಸದಸ್ಯ ಪ್ರವೀಣಕುಮಾರ್ ಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಉದಯ ಗಾಂವ್‌ಕರ ಕಾರ್ಯಕ್ರಮ ನಿರ್ವಹಿಸಿದರು.

Exit mobile version