Kundapra.com ಕುಂದಾಪ್ರ ಡಾಟ್ ಕಾಂ

ಸಾಮಾಜಿಕ ಅಸಮಾನತೆ ನಿವಾರಣೆಗೆ ಹೋರಾಟವೇ ಅಸ್ತ್ರ: ಗೋಪಾಲ ಪೂಜಾರಿ

ಬೈಂದೂರು: ಸಾಮಾಜಿಕವಾಗಿ ತುಳಿತಕ್ಕೊಳಗಾದ ಜನಾಂಗ ಹಾಗೂ ಹಿಂದುಳಿದ ಸಮುದಾಯವು ಅನುಭವಿಸಿದ ಅಸಮಾನತೆಯ ಬೇಗೆ, ಅಸ್ಪ್ರಶ್ಯತೆಯ ನೋವು ನಿವಾರಣೆಗೆ ಹೋರಾಟವನ್ನೇ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು. ಸಂವಿಧಾನಾತ್ಮಕ ಹಕ್ಕುಗಳನ್ನು ಕಲ್ಪಸುವುದರ ಮೂಲಕ ಸಮಾಜದ ಕಟ್ಟಕಡೆಯ ಸಮುದಾಯಕ್ಕೆ ಧ್ವನಿ ಹಾಗೂ ಶಕ್ತಿಯನ್ನು ನೀಡಿದ ದೇಶದ ಮಹಾನ್ ನಾಯಕ ಅಂಬೇಡ್ಕರ್ ಅವರ ಜೀವನ ಮತ್ತು ತತ್ವಾದರ್ಶಗಳು ಸದಾ ಅನುಕರಣೀಯ ಎಂದು ಶಾಸಕ ಗೋಪಾಲ ಪೂಜಾರಿ ಅವರು ಹೇಳಿದರು.

ಡಾ. ಬಿ. ಆರ್. ಅಂಬೇಡ್ಕರ್ ಸಂಘ ರಿ. ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಮಹಿಳಾ ಸಂಘ ರಿ. ಬೈಂದೂರು ಇವರ 20ನೇ ವಾರ್ಷಿಕೋತ್ಸವ ಹಾಗೂ ಅಂಬೇಡ್ಕರ್ ಅವರ 124ನೇ ಜನ್ಮದಿನಾಚರಣೆ ಅಂಗವಾಗಿ ಬೈಂದೂರಿನ ಶಾರದಾ ವೇದಿಕೆಯಲ್ಲಿ ಮಂಗಳವಾರ ರಾತ್ರಿ ಜರಗಿದ ಸಮಾರಂಭದಲ್ಲಿ ವಿವಿಧ ಸಾಧಕರನ್ನು ಸಮ್ಮಾನಿಸಿ ಅವರು ಮಾತನಾಡಿದರು. ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿ ಕುಂದಾಪುರ ಪೊಲೀಸ್ ಉಪಾದೀಕ್ಷಕ ಮಂಜುನಾಥ ಶೆಟ್ಟಿ, ಬ್ರಹ್ಮಾವರದ ನ್ಯಾಯವಾದಿ ಯಶಸ್ವಿನಿ ಅಮೀನ್ ಬಿ., ದಲಿತ ಚಿಂತಕ, ಬರಹಗಾರ ನಾರಾಯಣ ಮಣೂರು, ಅಂಬೇಡ್ಕರ್ ಸಂಘದ ನ್ಯಾಯವಾದಿ ಟಿ. ಮಂಜುನಾಥ ಗಿಳಿಯಾರು, ಸಂಘದ ಗೌರವಾಧ್ಯಕ್ಷ ಸುರೇಶ್‌ಕುಮಾರ್, ಮಹಿಳಾ ಸಂಘದ ಅಧ್ಯಕ್ಷೆ ಆಶಾ ಜಿ. ಮೊದಲಾದವರು ಉಪಸ್ಥಿತರಿದ್ದರು.

ಸಾಲಿಗ್ರಾಮ ಮೇಳದ ಭಾಗವತ ಆನಂದ ಅಂಕೋಲ ಮತ್ತು ೨೦೧೨ನೇ ಸಾಲಿನ ರಾಜೇಶ್ ಶಿಬಾಜೆ ಗ್ರಾಮೀಣ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಲಕ್ಷ್ಮಣ ಎಸ್. ಯಡ್ತರೆ ಅವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಯಾನಂದ ಪಿ. ಅವರು ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ಸಂಘದ ಕಾರ್ಯದರ್ಶಿ ಚೈತ್ರಾ ಯಡ್ತರೆ ಅವರು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪುಟಾಣಿಗಳು ಹಾಗೂ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

Exit mobile version