Kundapra.com ಕುಂದಾಪ್ರ ಡಾಟ್ ಕಾಂ

ಹಾಸ್ಯ, ಕಲೆ, ಕಾಳಜಿಯ ಸಮ್ಮಿಳಿತದಿಂದ ಉತ್ತಮ ವ್ಯಂಗ್ಯಚಿತ್ರ: ಓಂ ಗಣೇಶ್ ಉಪ್ಪುಂದ

ನಾಲ್ಕು ದಿನಗಳ ಕಾರ್ಟೂನು ಹಬ್ಬಕ್ಕೆ ತೆರೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಾಸ್ಯ ಪ್ರಜ್ಞೆ ಕಲಾ ಪ್ರಕಾರದಲ್ಲಿಯೇ ಶ್ರೇಷ್ಠವಾದದ್ದು. ಅದು ಎಲ್ಲರಲ್ಲೂ ಕಾಣಲು ಸಾಧ್ಯವಿಲ್ಲ. ಹಾಸ್ಯ ಪ್ರಜ್ಞೆಯ ಜೊತೆಗೆ, ಸಮಾಜದ ಬಗೆಗೆ ಕಾಳಜಿ ಹಾಗೂ ಗೆರೆಗಳೊಂದಿಗೆ ಬೆರಳಾಡಿಸುವ ಚಾಕಚಕ್ಯತೆಯ ಸಮ್ಮಿಳಿತವಿದ್ದರೆ ಉತ್ತಮ ವ್ಯಂಗ್ಯಚಿತ್ರಕಾರರನ್ನು ರೂಪುಗೊಳ್ಳುವಂತೆ ಮಾಡುತ್ತದೆ ಎಂದು ನಟ, ಜಾದೂಗಾರ ಓಂ ಗಣೇಶ್ ಉಪ್ಪುಂದ ಹೇಳಿದರು.

ಕಾರ್ಟೂನು ಕುಂದಾಪ್ರದ ನೇತೃತ್ವದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ಜರುಗಿದ ಕಾರ್ಟೂನು ಹಬ್ಬದ ಸಮಾರೋಪ ಹಾಗೂ ವಿವಿಧ ಸ್ವರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಅಕ್ಷರ ಬರುವ ಮೊದಲೇ ಇತಿಹಾಸ ಸೃಷ್ಟಿಯಾದದ್ದು ಚಿತ್ರ ಕಲಾವಿದರಿಂದ. ನಮ್ಮ ನಾಗರಿಕತೆನ್ನೂ ಅವಲೋಕಿಸಿದಾಗಲೂ ಗೆರೆಗಳೂ ಸಂವಹನ ಮಾಧ್ಯಮವಾಗಿದ್ದನ್ನು ಕಾಣಬಹುದು. ಮಾತಿನಲ್ಲಿ ಹೇಳಬೇಕಾದ್ದನ್ನು, ಪುಟಗಟ್ಟಲೆ ಬರೆಯಬೇಕಾದ್ದನ್ನು ಸಣ್ಣ ಚಿತ್ರ ಸಂಕೇತಿಕರಿಸುತ್ತದೆ ಎಂದರೆ ಅದರ ಪ್ರಭಾವ ಅಂತಾದ್ದು ಎಂದರು.

ಫ್ಯಾಶನ್ ಕೋರ್ಟ್ ಕುಂದಾಪುರದ ಮಾಲಿಕ ಕೆ. ಕಾರ್ತಿಕೇಯ ಮಧ್ಯಸ್ಥ, ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಹಿರಿಯ ವ್ಯಂಗ್ಯಚಿತ್ರಕಾರ ಭಾಸ್ಕರ್ ಕಲೈಕಾರ್ ಅವರನ್ನು ಅಭಿನಂದಿಸಲಾಯಿತು.

ಕ್ಯಾರಿಕೇಚರ್ ಮೂಲಕ ಬಂದ 20,600ರೂ. ಚಿತ್ರನಿಧಿಯನ್ನು ಬಿ.ಆರ್ ರಾಯರ ಹಿಂದೂ ಶಾಲೆಗೆ ಹಸ್ತಾಂತರಿಸಲಾಯಿತು. ಕಾರ್ಟೂನು ಹಬ್ಬದಲ್ಲಿ ಆಯೋಜಿಲಾಗಿದ್ದ ಮಾಯಾ ಕಾಮತ್, ಕಾರ್ಟೂನು ಮೊಗ್ಗು, ಸೈಬರಾಸುರ, ಕಾರ್ಟೂನು ಬರೆಯಿರಿ, ಡೈಲಾಗ್ ಹೊಡೆಯಿರಿ ಮೊದಲಾದ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವ್ಯಂಗ್ಯಚಿತ್ರಕಾರ ಕಾರ್ಟೂನು ಹಬ್ಬದ ರೂವಾರಿ ಸತೀಶ್ ಆಚಾರ‍್ಯ ಸ್ವಾಗತಿಸಿದರು. ವ್ಯಂಗ್ಯಚಿತ್ರಕಾರ ರಾಮಕೃಷ್ಣ ಹೇರ್ಳೆ ಸನ್ಮಾನಿತರನ್ನು ಪರಿಚಯಿಸಿದರು. ವ್ಯಂಗ್ಯಚಿತ್ರಕಾರರಾದ ಚಂದ್ರಶೇಖರ ಶೆಟ್ಟಿ, ಕೇಶವ ಸಸಿಹಿತ್ಲು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸುಧೀಂದ್ರ ತೆಕ್ಕಟ್ಟೆ ಸಹಕರಿಸಿ, ರವಿಕುಮಾರ್ ಗಂಗೊಳ್ಳಿ ನಿರೂಪಿಸಿದರು.

► ಕಾರ್ಟೂನು ಹಬ್ಬದ ವಿಶೇಷ ಪುಟ – http://kundapraa.com/cartoonuhabba

Exit mobile version