Kundapra.com ಕುಂದಾಪ್ರ ಡಾಟ್ ಕಾಂ

ಹೊಸ ಗ್ರಾಮ ಪಂಚಾಯತಿಗಳಿಗೆ ಮೂಲ ಸೌಕರ್ಯ ಒದಗಿಸಿ: ಶ್ರೀನಿವಾಸ ಪೂಜಾರಿ ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಿ. ಎಸ್. ನಂಜಯ್ಯನ ಮಠ ಸಮಿತಿ ಶಿಫಾರಸ್ಸಿನಂತೆ ೪೩೯ ಗ್ರಾಮ ಪಂಚಾಯತ್ ರಚಿಸಿದ ನಂತರ ಜನಪ್ರತಿನಿಧಿಗಳ ಬೇಡಿಕೆ ಆಧರಿಸಿ ಹೊಸ ಗ್ರಾಮ ಪಂಚಾಯತ್‌ಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗೋಸ್ಕರ ೨೦ ಲಕ್ಷ ಅನುದಾನ ಬಿಡುಗಡೆ ಮಾಡಲು ಸರ್ಕಾರ ಆದೇಶ ಹೊರಡಿಸಿದರೂ, ಆದೇಶ ಭರವಸೆಯಾಗಿಯೇ ಉಳಿದಿದೆಯೇ ಹೊರತು ಯಾವ ಚಿಕ್ಕಾಸು ಗ್ರಾಮ ಪಂಚಾಯತ್‌ಗಳಿಗೆ ಬಿಡುಗಡೆಯಾಗದಿರಲು ಕಾರಣವೇನು ಎಂದು ಕೋಟಾ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್‌ನಲ್ಲಿ ಪ್ರಶ್ನಿಸಿದರು.

ಇನ್ನೂ ೩೯೨ ಗ್ರಾಮ ಪಂಚಾಯತ್‌ಗಳಿಗೆ ಸ್ವಂತ ಕಟ್ಟಡವಿಲ್ಲ, ಸರ್ಕಾರಿ ನಿವೇಶನವು ಮಂಜೂರಾಗದೇ ಶಾಲೆಯ ಕೊಠಡಿಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತ್‌ಗಳ ದೈನಂದಿನ ಕೆಲಸ ಕಾರ್ಯ ನಡೆಯುತ್ತಿದ್ದು ಇದರಿಂದ ಶಾಲಾ ಮಕ್ಕಳಿಗೂ ಮತ್ತು ಶಿಕ್ಷಕರಿಗೂ ತೊಂದರೆಯಾಗುತ್ತಿರುವ ಬಗ್ಗೆ ಅವರು ಉಲ್ಲೇಖಿಸಿದರು.

ಗ್ರಾಮ ಪಂಚಾಯತ್‌ಗಳ ಕಾರ್ಯ ನಿರ್ವಹಣೆಗೆ ಪಿ.ಡಿ.ಓ, ಕಾರ್ಯದರ್ಶಿ, ಲೆಕ್ಕ ಸಹಾಯಕರು ಸೇರಿದಂತೆ ಗ್ರಾಮ ಪಂಚಾಯತ್‌ಗಳಿಗೆ ಬೇಕಾದ ಸಿಬ್ಬಂದಿಗಳ ವ್ಯವಸ್ಥೆ ಸಹ ಸರಿಯಾಗಿ ಮಾಡಿಲ್ಲ. ೪೬೦ ಗ್ರಾಮ ಪಂಚಾಯತ್‌ಗಳಿಗೆ ಹೊಸ ಕಟ್ಟಡ, ಕಂಪ್ಯೂಟರ್, ಸ್ಕ್ಯಾನರ್ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಒತ್ತಾಯಿಸಿದ್ದು, ಪಂಚಾಯತ್ ರಾಜ್ ಸಚಿವ ಹೆಚ್.ಕೆ ಪಾಟೀಲ್ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯತ್‌ಗಳಿಂದ ಎಸ್ಕಾಂಗೆ ಪಾವತಿಸಲು ಬಾಕಿ ಇರುವ ಒಟ್ಟು ವಿದ್ಯುತ್ ಬಿಲ್ಲಿನ ಮೊತ್ತವೆಷ್ಟು? ಶೇ. ೧೦೦ ರಷ್ಟು ವಿದ್ಯುತ್ ಬಿಲ್ ಪಾವತಿಸಿದ ಗ್ರಾಮ ಪಂಚಾಯತ್‌ಗಳಿಗೆ ಸಬ್ಸಿಡಿ ಸರ್ಕಾರ ನೀಡುತ್ತಿದೆಯೇ? ನೀಡುತ್ತಿದ್ದಲ್ಲಿ ಪಂಚಾಯತ್ ವಾರು ವಿವರ ಒದಗಿಸುವ ಜೊತೆ ಗ್ರಾಮ ಪಂಚಾಯತ್‌ಗಳ ವಿದ್ಯುತ್ ಬಿಲ್ ಬಾಕಿ ಮೇಲೆ ಬಡ್ಡಿ ಮನ್ನಾ ಮಾಡಲು ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂಬ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನೆಗೆ ಉತ್ತರಿಸಿದ ಇಂಧನ ಸಚಿವ ವಿದ್ಯುತ್ ಬಿಲ್ಲುಗಳನ್ನು ನಿಗಧಿತ ದಿನದೊಳಗೆ ಪಾವತಿ ಮಾಡಿದ ಗ್ರಾಮ ಪಂಚಾಯತ್‌ಗಳಿಗೆ ಶೇ. ೨೫ ರಷ್ಟು ಪವರ್ ಸಬ್ಸಿಡಿ ಬಿಡುಗಡೆ ಮಾಡಲಾಗಿದೆ. ಆದರೆ ವಿದ್ಯುತ್ ಬಿಲ್ಲುಗಳ ಮೇಲಿನ ಬಡ್ಡಿ ಮನ್ನಾ ಮಾಡುವ ಬಗ್ಗೆ ಸರ್ಕಾರ ಹಂತ ಹಂತವಾಗಿ ಪರಿಶೀಲನೆ ಮಾಡುವುದೆಂದು ಉತ್ತರಿಸಿದರು.

ಕಾರ್ಕಳ ತಾಲೂಕ್ ಮುಂಡ್ಕೂರು ಗ್ರಾಮ ಪಂಚಾಯತ್‌ನಲ್ಲಿ ಅಲ್ಲಿನ ಅಭಿವೃದ್ಧಿ ಅಧಿಕಾರಿ ತಮ್ಮ ಗ್ರಾಮ ಪಂಚಾಯತಿಯ ಬಾಕಿ ಇರುವ ಹಳೆಯ ವಿದ್ಯುತ್ ಬಿಲ್ಲುಗಳ ಮರು ಹೊಂದಾಣಿಕೆಯನ್ನು ಮಾಡಿದ ನಂತರ ವಿದ್ಯುತ್ ನಿಗಮವೇ ಗ್ರಾಮ ಪಂಚಾಯತ್‌ಗಳಿಗೆ ಹಣವನ್ನು ವಾಪಾಸು ಮಾಡಿದ ಪ್ರಸಂಗವನ್ನು ತಿಳಿಸಿ ಮುಂದಿನ ದಿನಗಳಲ್ಲಿ ಸರ್ಕಾರವು ಇದೇ ರೀತಿ ಮರು ಹೊಂದಾಣಿಕೆ ಮಾಡುವ ಅವಕಾಶವನ್ನು ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ನೀಡಬೇಕು ಎಂದು ಕೋಟ ಒತ್ತಾಯಿಸಿದ್ದು, ಸಚಿವರು ಅವಕಾಶ ಗ್ರಾಮ ಪಂಚಾಯತ್‌ಗಳಿಗೆ ನೀಡುವುದಾಗಿ ತಿಳಿಸಿದರು.

Exit mobile version