Kundapra.com ಕುಂದಾಪ್ರ ಡಾಟ್ ಕಾಂ

ಏಡ್ಸ್ ಬಗ್ಗೆ ಅರಿವು ಮೂಡಿಸಿ, ನಿಯಂತ್ರಣಕ್ಕೆ ತರುವಂತಾಗಬೇಕು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್‌ಕಾರ‍್ಸ್ ಕಾಲೇಜಿನಲ್ಲಿ “ವಿಶ್ವ ಏಡ್ಸ್ ದಿನ”ದ ಪ್ರಯುಕ್ತ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕ ಮತ್ತು ಯೂತ್ ರೆಡ್‌ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಚಿನ್ಮಯಿ ಆಸ್ಪತ್ರೆ ಕುಂದಾಪುರ ಇದರ ನಿರ್ದೇಶಕರಾದ ಡಾ| ಉಮೇಶ್ ಪುತ್ರನ್ ಮಾತನಾಡಿ ನಾವು ಏಡ್ಸ್ ದಿನವನ್ನು ಆಚರಣೆ ಮಾಡುವಂತಾಗಬಾರದು. ಇದರ ಬಗ್ಗೆ ಅರಿವು ಮೂಡಿಸಿ, ಏಡ್ಸ್‌ನ್ನು ನಿಯಂತ್ರಣಕ್ಕೆ ತರುವಂತಾಗಬೇಕು ಅಂತ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್.ಪಿ. ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕು ಘಟಕದ ಸಭಾಪತಿಗಳಾದ ಎಸ್. ಜಯಕರ ಶೆಟ್ಟಿಯವರು ಪ್ರಾಸ್ತಾವಿಕ ಮಾತನ್ನಾಡಿದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕದ ಪದಾಧಿಕಾರಿಗಳಾದ ಡಾ| ಹೆಚ್.ಎಸ್. ಮಲ್ಲಿ, ಮುತ್ತಯ್ಯ ಶೆಟ್ಟಿ, ಶ್ರೀ ಶಿವರಾಮ ಶೆಟ್ಟಿ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಸತ್ಯನಾರಾಯಣ ಉಪಸ್ಥಿತರಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಿ.ಎಂ. ಗೊಂಡ ಎಲ್ಲರನ್ನು ಸ್ವಾಗತಿಸಿ, ಮೈತ್ರಿ ನಿರೂಪಿಸಿ, ವಿದ್ಯಾರಾಣಿ ವಂದಿಸಿದರು.

Exit mobile version