Kundapra.com ಕುಂದಾಪ್ರ ಡಾಟ್ ಕಾಂ

ಮೀನುಗಾರರಿಗೆ ಶ್ರೀರಾಮನೇ ಆರಾಧ್ಯ ದೇವ: ಶ್ರೀ ವಿಧುಶೇಖರಾನಂದ ಸ್ವಾಮೀಜಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೀನುಗಾರರು ರಾಮಾಯಣದ ಕಾಲದಿಂದಲೂ ಶ್ರೀರಾಮನ ಅನನ್ಯ ಭಕ್ತರು ಎನ್ನುವುದಕ್ಕೆ ಅರಸ ಗುಹ ಸಾಕ್ಷಿ. ವನವಾಸಕ್ಕೆ ಹೊರಟ ಶ್ರೀರಾಮನನ್ನು ಮೀನುಗಾರರ ಅರಸನಾದ ಗುಹ ಬರಮಾಡಿಕೊಂಡು ತನ್ನ ರಾಜ್ಯವನ್ನು ಅವನಿಗೆ ಸಮರ್ಪಿಸಲು ಮುಂದಾದವ. ಅಂದಿನಿಂದ ಇಂದಿನ ವರೆಗೂ ಈ ಪರಂಪರೆ ಮುಂದುವರಿದಿರುವುದಕ್ಕೆ ಎಲ್ಲೆಡೆಯ ಮೀನುಗಾರರು ಶ್ರೀರಾಮನನ್ನು ಆರಾಧ್ಯ ದೇವರಾಗಿ ಸ್ವೀಕರಿಸಿರುವುದೇ ನಿದರ್ಶನ ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಯತಿ ಶ್ರೀ ವಿಧುಶೇಖರಾನಂದ ಸ್ವಾಮೀಜಿ ಹೇಳಿದರು.

ಮರವಂತೆಯ ಮೀನುಗಾರರ ಶ್ರೀರಾಮ ಮಂದಿರಕ್ಕೆ ಸಂಜೆ ಆಗಮಿಸಿ, ಸಮುದಾಯದವರಿಂದ ಗುರುವಂದನೆ ಸ್ವೀಕರಿಸಿದ ಬಳಿಕ ಅವರು ಅನುಗ್ರಹ ಪ್ರವಚನಗೈದರು. ಶ್ರೀರಾಮ ಆದರ್ಶ ಪುರುಷನ ರೂಪದಲ್ಲಿ ಅವತಾರವೆತ್ತಿದ ಭಗವಂತ. ಮಾರಿಚನಂತಹ ರಕ್ಕಸ ಶ್ರೀರಾಮನನ್ನು ಧರ್ಮದ ಶರೀರ ರೂಪಿ ಎಂದು ವರ್ಣಿಸಿದ್ದ. ಶ್ರೀರಾಮ ನಾಮ ಉಚ್ಚಾರದಿಂದ ಸಕಲ ಪಾಪಗಳು ದೂರಾಗುತ್ತವೆ. ಅದು ಎಲ್ಲಕರ ಪಾಲಿನ ತಾರಕ ಮಂತ್ರ. ಕಷ್ಟ ಸಹಿಷ್ಣುಗಳಾದ ಮೀನುಗಾರರು ರಾಮಾರಾಧನೆಯ ಮೂಲಕ ಕಷ್ಟ ಪರಿಹರಿಸಿಕೊಳ್ಳುತ್ತಾರೆ, ಸಮೃದ್ಧಿ ಹೊಂದುತ್ತಾರೆ ಎಂದು ಅವರು ಹೇಳಿದರು.

ಎಂ. ಕೆ. ಪ್ರಭಾಕರ ಸ್ವಾಗತಿಸಿದರು. ಪೀಠದ ಪ್ರಾಂತೀಯ ಧರ್ಮಾಧಿಕಾರಿ ಡಾ. ಎಚ್. ವಿ. ನರಸಿಂಹ ಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ವೆಂಕಟರಮಣ ಖಾರ್ವಿ ಸ್ವಾಮೀಜಿ ಅವರಿಗೆ ಫಲಪುಷ್ಪ, ಗೀತಾಬೋಧನೆಯ ಸುಂದರ ಕಲಾಕೃತಿ ಸಮರ್ಪಿಸಿದರು. ಮೀನುಗಾರ ತಂಡಗಳ ವತಿಯಿಂದ ಪಾದಪೂಜೆ ನೆರವೇರಿತು. ಶ್ರೀಧರ ಕಾರ್ವಿ ವಂದಿಸಿದರು. ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ನಿರೂಪಿಸಿದರು. ಆಗಮಿಸಿದ ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತ ನೀಡಿ, ವಾದ್ಯಘೋಷ ಸಹಿತವಾದ ಮೆರವಣಿಗೆಯಲ್ಲಿ ಶ್ರೀರಾಮ ಮಂದಿರಕ್ಕೆ ಬರಮಾಡಿಕೊಳ್ಳಲಾಯಿತು.

Exit mobile version