Kundapra.com ಕುಂದಾಪ್ರ ಡಾಟ್ ಕಾಂ

ಖಂಬದಕೋಣೆ: ವಿಜಯಾ ಬ್ಯಾಂಕ್ ನೂತನ ಕಟ್ಟಡಕ್ಕೆ ಸ್ಥಳಾಂತರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತನ್ನ ಸೇವೆಗಳ ಮೂಲಕ ಜನಮನ ಗೆದ್ದಿರುವ ವಿಜಯಾ ಬ್ಯಾಂಕ್ ತನ್ನ ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಸೇವೆ, ಸೌಲಭ್ಯ ಸೇವೆಗಳನ್ನು ನೀಡುವ ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿದ್ದು, ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರ ರಾವ್ ವೈ. ಹೇಳಿದರು.

ಖಂಬದಕೋಣೆಯ ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘದ ಸಮುದಾಯ ಭವನಕ್ಕೆ ಸ್ಥಳಾಂತರಗೊಂಡ ವಿಜಯಾ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವ ವಿಜಯಾ ಬ್ಯಾಂಕ್ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ್ಮತಾಳಿದ್ದು, ಬ್ಯಾಂಕಿನ ೨೫೬ನೇ ಶಾಖೆಯಾಗಿ ಖಂಬದಕೋಣೆಯಲ್ಲಿ ೧೯೭೪ರಲ್ಲಿ ಪ್ರಾರಂಭಿಸಲಾಯಿತು. ಈಗ ದೇಶಾದ್ಯಂತ ೧೯೯೫ ಶಾಖೆಗಳನ್ನು ಬ್ಯಾಂಕ್ ಹೊಂದಿದೆ. ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಅಲ್ಲದೇ ಹಿಂದೆ ಆರ್ಥಿಕ ವಿಪ್ಲವದ ಕಾಲಘಟ್ಟದಲ್ಲಿ ವಿಜಯಾ ಬ್ಯಾಂಕ್ ಸ್ಥಾಪಿಸುವುದರ ಮೂಲಕ ಹಣಕಾಸಿನ ವ್ಯವಹಾರದ ಪುನಃಶ್ಚೇತನಕ್ಕೆ ನಾಂದಿಯಾಗಿದ್ದ ಬ್ಯಾಂಕಿನ ಸಂಸ್ಥಾಪಕ ಮೂಲ್ಕಿ ಸುಂದರಾಂ ಶೆಟ್ಟಿ ಅವರ ಕನಸನ್ನು ನನಸು ಮಾಡುತ್ತಿರುವ ದೇಶದ ಅಗ್ರಮಾನ್ಯ ಬ್ಯಾಂಕುಗಳಲ್ಲಿ ಒಂದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೇವೆ ನೀಡುವ ಉದ್ದೇಶದಿಂದ ಈ ಭಾಗದ ಎಲ್ಲಾ ಶಾಖೆಗಳಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘದ ಅಧ್ಯಕ್ಷ ನವೀನಚಂದ್ರ ಉಪ್ಪುಂದ ಭದ್ರತಾ ಕೊಠಡಿ ಹಾಗೂ ಉಪ ಮಹಾಪ್ರಬಂಧಕ, ಉಡುಪಿ ಪ್ರಾದೇಶಿಕ ಪ್ರಬಂಧಕ ಎಮ್. ಜೆ. ನಾಗರಾಜ್ ಬ್ಯಾಂಕಿನ ಎಟಿಎಂ ಘಟಕವನ್ನು ಉದ್ಘಾಟಿಸಿದರು. ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ನವೀನಚಂದ್ರ ಉಪ್ಪುಂದ ಪ್ರಧಾನ ಕಾರ್ಯದರ್ಶಿ ಎ. ಆನಂದ ಖಾರ್ವಿ, ಕೋಶಾಧ್ಯಕ್ಷ ಶಂಕರ ಖಾರ್ವಿ, ಹಿಂದಿನ ಶಾಖೆಹೊಂದಿದ ಕಟ್ಟಡ ಮಾಲಿಕ ಶ್ರೀಧರ ಉಡುಪ ಇವರನ್ನು ಸನ್ಮಾನಿಸಲಾಯಿತು. ಶಾಖಾಪ್ರಬಂಧಕ ಸುಕೇಶ್ ಕುಮಾರ್ ಯು., ವಿವಿಧ ಶಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ವಿಶ್ವನಾಥ ಶೆಟ್ಟಿ ನಿರೂಪಿಸಿದರು.

Exit mobile version