Kundapra.com ಕುಂದಾಪ್ರ ಡಾಟ್ ಕಾಂ

ರಂಗಭೂಮಿಯಿಂದ ವೈಚಾರಿಕ ಬೆಳೆ ತೆಗೆಯಬೇಕು: ರಂಗ ನಿರ್ದೇಶಕ ಕಿರಣ್ ಭಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾಟಕವನ್ನು ಚಂದಗೊಳಿಸುವ ಕಡೆಗೆ ನಿರ್ದೇಶಕರು ಗಮನ ಹರಿಸುವುದಕ್ಕಿಂತ ಹೆಚ್ಚಾಗಿ ರಂಗಭೂಮಿಯನ್ನು ಸದೃಢವಾಗಿ ಕಟ್ಟುವ ಬಗೆಗೆ ಮನಸ್ಸು ಮಾಡಿ, ವೈಚಾರಿಕ ಬೆಳೆ ತೆಗೆಯಲು ಪ್ರಯತ್ನಿಸಬೇಕಿದೆ ಎಂದು ಹೊನ್ನಾವರದ ರಂಗ ನಿರ್ದೇಶಕ ಕಿರಣ್ ಭಟ್ ಹೇಳಿದರು.

ಅವರು ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ’ರಂಗಸುರಭಿ ೨೦೧೬’ ನಾಟಕ ಸಪ್ತಾಹದ ಎರಡನೇ ದಿನ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದರು. ರಂಗಭೂಮಿಯ ಪ್ರತಿನಟನೂ ಎದುರಿಗೆ ತನ್ನನ್ನು ನೋಡುವವರಿದ್ದಾರೆ ಎಂಬ ಗ್ರಹಿಕೆಯ ಮೆಲೆ ನಟಿಸುತ್ತಾನೆ. ಆ ಮೂಲಕ ಪಾತ್ರವನ್ನು ಜೀವಿಸುತ್ತಾನೆ. ನಾಟಕ ಪ್ರೇಕ್ಷಕರನ್ನು ಭ್ರಮೆಯಿಂದ ವಾಸ್ತಗಳತ್ತ ಕರೆದೊಯ್ಯುವಂತಿರಬೇಕು. ರಂಗಭೂಮಿ ಲೋಕಭೂಮಿಯಾದಾಗ ನಮ್ಮಲ್ಲಿನ ತುಮುಲುಗಳನ್ನು, ಸಂವೇದನೆಯನ್ನು ಹಂಚಿಕೊಳ್ಳಲು ಸಾಧ್ಯವಿದೆ.

ನಮ್ಮನ್ನು ಮಾತನಾಡದೇ ಇರುವ ಹಾಗೆ ಮಾಡುವ ಪ್ರಯತ್ನಗಳು ಸುತ್ತಲು ನಡೆಯುತ್ತಿರುವ ಈ ಸಮಯದಲ್ಲಿ ರಂಗಭೂಮಿಯ ಜವಾಬ್ದಾರಿ ಹೆಚ್ಚಿದೆ. ಹೇಳಬೇಕಾದ್ದನ್ನು ಗಟ್ಟಿಯಾಗಿ ಹೇಳುವ ತಾಕತ್ತು ಇಲ್ಲಿರುವುದರಿಂದ ರಂಗಭೂಮಿಯ ಕಲಾವಿದರು ಜೊತೆ ಸೇರುವ, ಬದುಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗೆ ಯೋಚಿಸುವ, ನಮ್ಮ ಹಾಗೂ ಜನರ ಸಮಸ್ಯೆಗಳನ್ನು ಹೇಳಿ ಪರಿಹಾರ ಕಂಡುಕೊಳ್ಳುವ ಅಗತ್ಯತೆ ಇದೆ ಎಂದವರು ಹೇಳಿದರು.

ಅರಣ್ಯ ಇಲಾಖೆಯ ನಿವೃತ್ತ ಐಎಫ್‌ಎಸ್ ಬಿ. ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ವಲಯ-೧ರ ಅಸಿಸ್ಟೆಂಟ್ ಗವರ್ನ್‌ರ್ ಸತೀಶ್ ಎನ್. ಶೇರೆಗಾರ್, ನಿವೃತ್ತ ಉಪನ್ಯಾಸಕ ವಾಸುದೇವ ಕಾರಂತ ಕೊಡೇರಿ, ಸುರಭಿಯ ನಿರ್ದೇಶಕರಾದ ಸುಧಾಕರ ಪಿ. ಬೈಂದೂರು, ಗಣಪತಿ ಹೋಬಳಿದಾರ್, ಕಾರ್ಯದರ್ಶಿ ಲಕ್ಷ್ಮಣ್ ವೈ ಕೊರಗ ವಂದಿಸಿದರು. ಸುರಭಿ ರಿ. ಬೈಂದೂರು ಅಧ್ಯಕ್ಷ ಶಿವರಾಮ ಕೊಠಾರಿ ಯಡ್ತರೆ ಸ್ವಾಗತಿಸಿದರು. ಯಸ್ಕೋರ್ಡ್ ಟ್ರಸ್ಟ್‌ನ ಕೃಷ್ಣಮೂರ್ತಿ ಉಡುಪ ಕಬ್ಸೆ ವಂದಿಸಿದರು. ಶಿಕ್ಷಕ ಸುಬ್ರಹ್ಮಣ್ಯ ತಗ್ಗರ್ಸೆ ನಿರೂಪಿಸಿದರು.

Exit mobile version