Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿದ ಸಚಿವೆ ಉಮಾಶ್ರೀ

ಇಂದಿರಾ ಗಾಂಧಿಯ ಕ್ರಾಂತಿಕಾರಿ ಹೆಜ್ಜೆಗಳು ಬಡತನ ನಿವಾರಣೆಗೆ ಶ್ರಮಿಸಿದ್ದವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಗತ್ತಿನ ಕೆಲವೇ ಮುಂಚೂಣಿ ಮಹಿಳಾ ನಾಯಕಿಯಾಗಿ ಪೈಕಿ ಗುರುತಿಸಿಕೊಂಡಿದ್ದ ಇಂದಿರಾ ಗಾಂಧಿ, ಹದಿನಾರು ವರ್ಷ ದೇಶದ ಪ್ರಧಾನಿಯಾಗಿ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು, ಜನಪರ ಕಾರ್ಯಕ್ರಮಗಳ ಮೂಲಕ ಬಡತನ ನಿವಾರಣೆಗೆ ಶ್ರಮಿಸಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದರು.

ಬೈಂದೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಜೆಎನ್‌ಆರ್ ಕಲಾಮಂದಿರದಲ್ಲಿ ನಡೆದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಮತ್ತು ಬ್ಲಾಕ್ ನೂತನ ಅಧ್ಯಕ್ಷೆ ಗೌರಿ ದೇವಾಡಿಗರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಾಗತಿಕ ಶಾಂತಿಗೆ ಇಂದಿಗಾ ಗಾಂಧೀ ಅವರ ಕೊಡುಗೆ ವಿಶೇಷವಾದುದು. ದೇಶದ ಮಹಿಳೆಯರಿಗೆ ಶಕ್ತಿ, ಅವಕಾಶ ಬಂದುದು ಅವರಿಂದ. ದೇಶದ ಅಖಂಡತೆಗಾಗಿ ಅವರು ಬಲಿದಾನವಾದರು. ದೇಶದ ಜನ ಆತ್ಮಸ್ಥೈರ್ಯ ಕಳೆದುಕೊಳ್ಳದೆ, ಗೌರವ ಬರುವಂತೆ ಕೆಲಸ ಮಾಡಬೇಕು ಎಂದರು.

ಮಹಿಳೆಯರು ರಾಜಕೀಯ ಕ್ಷೇತ್ರಕ್ಕೆ ಬಂದಾಗ ಹಲವು ಸಮಸ್ಯೆಗಳು ಎದುರಾಗುತ್ತವೆ. ಅವರು ಪುರುಷರ ನಡುವೆ ಕೆಲಸ ಮಾಡಬೇಕು. ಆದರೆ ಎದೆಗುಂದದೆ, ಆತ್ಮಸ್ಥೈರ್ಯ ಕಳೆದುಕೊಳ್ಳದೆ ಗೌರವ ಬರುವಂತೆ ಕೆಲಸ ಮಾಡಬೇಕು. ಪಕ್ಷದೆಡೆಗೆ ಬದ್ಧತೆ ಮತ್ತು ಕಾಳಜಿಯಿಂದ ದುಡಿದರೆ ಮಹಿಳೆಯರಿಗೂ ವಿಶೇಷ ಅವಕಾಶ ದೊರೆಯುತ್ತದೆ ಎಂದರು. ರಾಜ್ಯದ ಕಾಂಗ್ರೆಸ್ ಸರಕಾರ ಕಳೆದ ಮೂರುವರೆ ವರ್ಷಗಳಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಿದೆ. ಅದು ದೇಶ ಜಾತ್ಯತೀತ ಶಕ್ತಿಯಾಗಿ ಆಡಳಿತ ನಿರ್ವಹಿಸಿದೆ. ಶಾಂತಿ, ಭಾವೈಕ್ಯತೆಗಾಗಿ ಶ್ರಮಿಸಿದೆ. ಬಡವರಿಗಾಗಿ ವಿಶೇಷ ಕೊಡುಗೆಗಳನ್ನು ನೀಡಿದೆ. ಮಹಿಳೆಯರು ಮುಂದಿನ ಚುನಾವಣೆಯಲ್ಲಿ ಇದನ್ನು ಮತಗಳಾಗಿ ಪರಿವರ್ತಿಸಿ, ಪಕ್ಷದ ಅಭ್ಯರ್ಥಿಗಳು ಜಯಗಳಿಸುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಗೌರಿ ದೇವಾಡಿಗ, ರಾಜ್ಯ ಸರ್ಕಾರ ಬಡವರಿಗೆ ಉಚಿತ ಅಕ್ಕಿ ನೀಡುವ ಮೂಲಕ ಬಡವರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ವಹಿಸಿದ್ದರು. ಈ ಸಂದರ್ಭ ಬೈಂದೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಆಯ್ಕೆಯಾದ ಜಿಲ್ಲಾ ಪಂಚಾಯಿತ್ ಸದಸ್ಯೆ ಗೌರಿ ದೇವಾಡಿಗ ಅವರಿಗೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೊನಿಕಾ ಕರ್ನೆಲಿಯೋ ಪಕ್ಷದ ಧ್ವಜ ನೀಡುವ ಮೂಲಕ ಘೋಷಣೆ ಮಾಡಿದರು. ಸಚಿವೆ ಉಮಾಶ್ರೀ ಹಾಗೂ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ಸಾಧು ಬಿಲ್ಲವ, ಜಿ,ಪಂಸದಸ್ಯೆ ಜ್ಯೋತಿ ನಾಯಕ್, ತಾ.ಪಂ.ಸದಸ್ಯ ಜ್ಯೋತಿ ವಿ ಪುತ್ರನ್, ಪ್ರಮೀಳಾ ಕೆ. ದೇವಾಡಿಗ, ಗ್ರೀಷ್ಮಾ ಬಿಡೆ, ಅಂಬಿಕಾ, ಕಾಂಗ್ರೆಸ್ ಮುಖಂಡರಾದ ಪ್ರಕಾಶ್ಚಂದ್ರ ಶೆಟ್ಟಿ, ರಘುರಾಮ ಶೆಟ್ಟಿ, ರಿಯಾಜ್ ಅಹ್ಮದ್, ಮಂಜಯ್ಯ ಶೆಟ್ಟಿ, ಸುನಿಲ್, ವಾಸುದೇವ ಯಡಿಯಾಳ್, ಪಿ.ಎಲ್. ಜೋಸ್, ರಾಜು ದೇವಾಡಿಗ ಬೈಂದೂರು ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಸ್ಥಿತರಿದ್ದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಪ್ಪಾರ್ಪಣೆ ಮಾಡಲಾಯಿತು. ವಿ.ಆರ್.ಡಬ್ಲ್ಯೂ ಸಂಘಟನೆಯ ವತಿಯಿಂದ ಮಾಸಿಕ ವೇತನ ಹೆಚ್ಚಳ ಮಾಡುವಂತೆ ಸಚಿವೆಗೆ ಮನವಿ ಮಾಡಲಾಯಿತು. ಬೈಂದೂರು ಬ್ಲಾಕ್ ಅಧ್ಯಕ್ಷ ಮದನ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Exit mobile version