ಸಾರ್ವಜನಿಕರ ಸಹಭಾಗಿತ್ವದಿಂದ ಕನ್ನಡ ಶಾಲೆಯ ಯಶಸ್ಸು: ಶಾಸಕ ಗೋಪಾಲ ಪೂಜಾರಿ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸರಕಾರದೊಂದಿಗೆ ಸಾರ್ವಜನಿಕರ ಸಹಭಾಗಿತ್ವವಿದ್ದರೆ ಕನ್ನಡ ಶಾಲೆಯಲ್ಲಿ ಕ್ಷೀಣಿಸುತ್ತಿರುವ ಮಕ್ಕಳ ಸಂಖ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಈ ಬಗ್ಗೆ ಶಿಕ್ಷಕರು ಹಾಗೂ ಊರಿನವರು ಗಂಭೀರವಾಗಿ ಚಿಂತಿಸಿ ಸರಕಾರಿ ಶಾಲೆಗಳ ಉಳಿವಿಗೆ ಕೈಜೊಡಿಸುವ ಅಗತ್ಯವಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಬೈಂದೂರು ವಲಯದ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಿಸಿಯೂಟ, ಹಾಲು, ಪುಸ್ತಕ, ಸಮವಸ್ತ್ರ, ಬೂಟು, ಸ್ಕಾಲರ್‌ಶಿಪ್ ಮೂಲಕ ಕನ್ನಡ ಶಾಲೆಯ ಮಕ್ಕಳ ಕಲಿಕೆಗೆ ಸರಕಾರ ವಿಶೇಷ ಆದ್ಯತೆಯನ್ನು ನೀಡುತ್ತಿದೆ. ಆದಾಗ್ಯೂ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಉತ್ತಮ ಶಿಕ್ಷಣದೊಂದಿಗೆ ಸಾರ್ವಜನಿಕರ ಸಹಕಾರದಿಂದ ಸರಕಾರಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಕನ್ನಡ ಮಾಧ್ಯಮ ಶಾಲೆಯಲ್ಲಿಯೂ ಮಕ್ಕಳ ಉನ್ನತಿಯನ್ನು ಕಾಣಬಹುದಾಗಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ. ನಾರಾಐಣ ಹೆಗ್ಡೆ ಶುಭಶಂಸನೆಗೈದು, ಉತ್ತಮ ಪ್ರಜೆ ನಿರ್ಮಾಣವೆಂಬುದು ಶಿಕ್ಷಣದ ಗುರಿ. ಮಕ್ಕಳು ಕ್ರೀಯಾಶೀಲ ಕನಸು ಕಂಡು ಆ ಮೂಲಕ ನಾಡಿಗೆ ಶಕ್ತಿತುಂಬುವ ಪ್ರಜೆ ಶಿಕ್ಷಣ ಕೇಂದ್ರದ ಮೂಲಕ ರೂಪುಗೊಳ್ಳುವಂತಾಗಬೇಕು ಎಂದರು.
ನಾವುಂದ ಸ.ಪ.ಪೂ ಕಾಲೇಜಿನ ಸಹಶಿಕ್ಷಕ ಕರುಣಾಕರ ಶೆಟ್ಟಿ ಎನ್. ಸ್ವಸ್ತಿವಾಚನಗೈದರು. ಶಾಲೆಯ ಹಳೆ ವಿದ್ಯಾರ್ಥಿ, ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಅವರನ್ನು ಸನ್ಮಾನಿಸಲಾಯಿತು. ವಾಷಿಕೋತ್ಸವಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. ಉಡುಪಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಜಿಪಂ ಸದಸ್ಯ ಶಂಕರ ಪೂಜಾರಿ, ತಾಪಂ ಉಪಾಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ, ತಾಪಂ ಸದಸ್ಯೆ ಮಾಲಿನಿ ಕೆ., ಬೈಂದೂರು ಗ್ರಾಪಂ ಬಾಲಕೃಷ್ಣ ಹೆಗ್ಡೆ, ಸದಸ್ಯರಾದ ಲಕ್ಷ್ಮೀ, ಭವಾನಿ ಗಾಣಿಗ, ನಾಗರತ್ನ ಮೊಗವೀರ, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ತಗ್ಗರ್ಸೆ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಪ್ರಭಾಕರ ಗಾಣಿಗ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟರಮಣ ದೇವಾಡಿಗ, ವಿದ್ಯಾರ್ಥಿ ನಾಯಕ ಆದೀಶ್ ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಾಲಾ ಮುಖ್ಯೋಪಧ್ಯಾಯ ತಿಮ್ಮಪ್ಪ ಗಾಣಿಗ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿ ಅಂಬಾಬಾಯಿ, ಗೌರವ ಶಿಕ್ಷಕಿ ಸರಸ್ವತಿ ಬಹುಮಾನ ವಿಜೇತರು ಹಾಗೂ ಸನ್ಮಾನಿತರ ಯಾದಿ ವಾಚಿಸಿದರು. ಶಿಕ್ಷಕಿ ಭಾಗೀರಥಿ ಎಲ್ ಸ್ವಾಗತಿಸಿ, ಶಿಕ್ಷಕಿ ಸಂಗೀತಾ ಕುಮಾರಿ ವಂದಿಸಿದರು. ಶಿಕ್ಷಕಿಯರಾದ ಜ್ಯೋತಿ ಎಚ್ ಹಾಗೂ ಸಾರಿಕಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಸಿಂದೂರ ಲಕ್ಷ್ಮಣ ನಾಟಕ ಪ್ರದರ್ಶನಗೊಂಡಿತು.
