Kundapra.com ಕುಂದಾಪ್ರ ಡಾಟ್ ಕಾಂ

ರಂಗಭೂಮಿಯಲ್ಲಿ ಹೆಣ್ಣಿನ ಧ್ವನಿ ಸಶಕ್ತವಾಗಬೇಕಿದೆ: ಪತ್ರಕರ್ತೆ ರೂಪಾ ಕೋಟೇಶ್ವರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮನುಷ್ಯನ ಬಗೆ ಬಗೆಯ ಮುಖಗಳನ್ನು ರಂಗಭೂಮಿಯಿಂದ ಮಾತ್ರ ಬಯಲು ಮಾಡಲು ಸಾಧ್ಯವಿದೆ. ಬದುಕಿನ ಪ್ರತಿಬಿಂಬದಂತೆ ಕಾಣುವ ರಂಗಭೂಮಿಯಲ್ಲಿ ಹೆಣ್ಣಿನ ಧ್ವನಿ ಇನ್ನಷ್ಟು ಸಶಕ್ತವಾಗಿ ಮೂಡಿಬರಬೇಕಿದೆ ಎಂದು ಪತ್ರಕರ್ತೆ ರೂಪಾ ಕೋಟೇಶ್ವರ ಹೇಳಿದರು.

ಅವರು ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ’ರಂಗಸುರಭಿ 2016’ ನಾಟಕ ಸಪ್ತಾಹದಲ್ಲಿ ದಿನದ ನುಡಿಗಳನ್ನಾಡುತ್ತಿದ್ದರು. ಮಹಿಳೆಯರು ನಟನೆ, ನಿರ್ದೇಶನದ ಜೊತೆಗೆ ರಂಗ ಪರಿಕಲ್ಪನೆಗಳನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಬೇಕು. ಆಗ ಮಾತ್ರ ರಂಗಭೂಮಿಯಲ್ಲಿ ಹೊಸ ಆಯಾಮ ಕಂಡುಕೊಳ್ಳಲು ಸಾಧ್ಯವಿದೆ ಎಂದು ಆಶಯ ವ್ಯಕ್ತಪಡಿಸಿದ ಅವರು ಪ್ರಾದೇಶಿಕ ಭಾಷಾ ಸೊಗಡನ್ನು ರಂಗಭೂಮಿಯಲ್ಲಿ ಅಳವಡಿಸಿಕೊಂಡರೆ ಸುಲಭವಾಗಿ ಜನರ ಮನಸ್ಸನ್ನು ತಟ್ಟಲು ಸಾಧ್ಯವಿದೆ ಎಂದರು.

ರಂಗ ಹಾಗೂ ಚಲನಚಿತ್ರ ನಿರ್ದೇಶಕ ರಾಜ್‌ಗುರು ಹೊಸ್ಕೋಟೆ ಅವರನ್ನು ಸನ್ಮಾನಿಸಲಾಯಿತು. ಜಿ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಜೀವವಿಮಾದ ಕ್ಷೇತ್ರಾಧಿಕಾರಿ ಸೋಮನಾಥನ್ ಆರ್., ತಾ.ಪಂ ಮಾಜಿ ಸದಸ್ಯ ರಾಮ ಕೆ., ಉದ್ಯಮಿ ಬಿ.ಜಿ ಕಮಲೇಶ್, ಸುರಭಿಯ ನಿರ್ದೇಶಕರಾದ ಸುಧಾಕರ ಪಿ. ಬೈಂದೂರು, ಗಣಪತಿ ಹೋಬಳಿದಾರ್, ಕಾರ್ಯದರ್ಶಿ ಲಕ್ಷ್ಮಣ್ ವೈ ಕೊರಗ ಉಪಸ್ಥಿತರಿದ್ದರು.

ಸುರಭಿ ರಿ. ಬೈಂದೂರು ಅಧ್ಯಕ್ಷ ಶಿವರಾಮ ಕೊಠಾರಿ ಯಡ್ತರೆ ಸ್ವಾಗತಿಸಿದರು. ಯಸ್ಕೋರ್ಡ್ ಟ್ರಸ್ಟ್‌ನ ಕೃಷ್ಣಮೂರ್ತಿ ಉಡುಪ ಕಬ್ಸೆ ವಂದಿಸಿದರು. ಶಿಕ್ಷಕ ಉದಯಕುಮಾರ್ ನಿರೂಪಿಸಿದರು. ರಂಗಪಯಣ ಬೆಂಗಳೂರು ಪ್ರಸ್ತುತಿಯ ಡಾ. ಸಾರಾ ಅಬೂಬಕ್ಕರ್ ಕಥೆ, ರೂಪಾ ಕೋಟೇಶ್ವರ ಅವರ ರಂಗರೂಪ, ನಯನ ಜೆ ಸೂಡ ಅವರ ನಿರ್ದೇಶನದ ’ಚಂದ್ರಗಿರಿ ತೀರದಲ್ಲಿ’ ನಾಟಕ ಪ್ರದರ್ಶನಗೊಂಡಿತು.

Exit mobile version