ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ , ತಾಲೂಕು ಮತ್ತು ಹೋಬಳಿ ಘಟಕಗಳ ಆಶ್ರಯದಲ್ಲಿ ನಾಡ ಗ್ರಾಮದ ಕುರುವಿನ ಕೆ. ಅಚ್ಯುತ ಹೆಬ್ಬಾರ್ ಅವರ ಮನೆಯ ಚಾವಡಿಯಲ್ಲಿ ಭಾನುವಾರ ’ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮ ನಡೆಯಿತು. ಹಿರಿಯ ಸಂಗೀತ ವಾದನ ಪರಿಣತರಾಗಿರುವ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದ ಔಚಿತ್ಯದ ಬಗ್ಗೆ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಸಾಹಿತ್ಯ ಮತ್ತು ಬದುಕು ಪ್ರತ್ಯೇಕಿಸಲಾಗದ್ದು. ಬದುಕಿನ ವಿವಿಧ ರಂಗಗಳ್ಲಿ ದುಡಿದವರನ್ನು ಗೌರವಿಸುವ ಮೂಲಕ ಅವರ ಸಾಧನೆಗೂ ಸಾಹಿತ್ಯಕ್ಕೂ ಇರುವ ಸಂಬಂಧವನ್ನು ಪ್ರಚುರಪಡಿಸಿದಂತಾಗುತ್ತದೆ. ಸಾಹಿತ್ಯದಿಂದ ದೂರ ಉಳಿದವರನ್ನು ಅದರೊಂದಿಗೆ ಬೆಸೆಯಲು ಸಾಧ್ಯವಾಗುತ್ತದೆ ಎಂದರು.
ಇದು ಕನ್ನಡದ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಎಂದ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕನ್ನಡ ಭಾಷೆಗೆ ಅಳಿವಿಲ್ಲ. ಅದು ಆಂಗ್ಲ ಭಾಷೆಯೂ ಸೇರಿದಂತೆ ಸಂಪರ್ಕಕ್ಕೆ ಬರುವ ಎಲ್ಲ ಭಾಷೆಗಳ ಪದಗಳನ್ನು ತನ್ನೊಳಗೆ ಸೇರಿಸಿಕೊಂಡು ಬೆಳೆಯುತ್ತಿದೆ. ಸಮುದಾಯಕ್ಕೆ ಹಿತವಾಗುವ ಕೆಲಸ ಮಾಡಿದ ಹಿರಿಯರನ್ನು ಪರಿಷತ್ತು ಗುರುತಿಸುವ ಮೂಲಕ ಭಾಷೆ ಮತ್ತು ಸಾಹಿತ್ಯದ ಪರಿಧಿಯನ್ನು ವಿಸ್ತರಿಸುವ ಕೆಲಸದಲ್ಲಿ ನಿರತವಾಗಿದೆ. ಅವರೆಲ್ಲರ ಕೊಡುಗೆಗಳನ್ನು ದಾಖಲಿಸಲಾಗುವುದು ಎಂದರು.
ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಅಭಿನಂದನೆಯ ನುಡಿಗಳನ್ನಾಡಿ ಅಚ್ಯುತ ಹೆಬ್ಬಾರರೊಂದಿಗಿನ ತಮ್ಮ ಒಡನಾಟ, ಅವರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಮೆಲುಕು ಹಾಕಿದರು. ಪಿ. ಶೇಷಪ್ಪಯ್ಯ ಶುಭ ಕೋರಿದರು. ವಂಡ್ಸೆ ಹೋಬಳಿ ಘಟಕದ ಅಧ್ಯಕ್ಷ ಚಂದ್ರ ಕೆ. ಹೆಮ್ಮಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ವಾಗತಿಸಿದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ಕಿಶೋರಕುಮಾರ ಶೆಟ್ಟಿ, ವಂದಿಸಿದರು. ಕೋಶಾಧಿಕಾರಿ ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿದ್ದರು