Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಧರ್ಮದ ಮೇಲಿನ ಆಕ್ರಮಣದ ಬಗೆಗೆ ಅರಿವಿಗಾಗಿ ಹಿಂದೂ ಧರ್ಮಜಾಗೃತಿ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹಿಂದೂ ಜನಜಾಗೃತಿ ಸಮಿತಿಯು ಹಿಂದುತ್ವದ ರಕ್ಷಣೆಗಾಗಿ ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆಯೋಜಿಸುತ್ತಿರುವ ಈ ಧರ್ಮಜಾಗೃತಿ ಸಭೆಗಳು ರಾಜಕೀಯ ಉದ್ದೇಶಕ್ಕಲ್ಲ. ಈ ವರ್ಷ ಕರ್ನಾಟಕದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಒಟ್ಟು ೭೦ ಕ್ಕಿಂತಲೂ ಹೆಚ್ಚು ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಮೂಲಕ ಹಿಂದೂ ಧರ್ಮದ ಮೇಲಾಗುತ್ತಿರುವ ವಿವಿಧ ಆಕ್ರಮಣಗಳ ಬಗ್ಗೆ ಅರಿವನ್ನು ಮೂಡಿಸುವುದು ಮಾತ್ರವಲ್ಲದೇ ಹಿಂದೂ ಧರ್ಮೀಯರಲ್ಲಿ ಸ್ವಧರ್ಮದ ಬಗ್ಗೆ ಸ್ವಾಭಿಮಾನವನ್ನು ಜಾಗೃತಗೊಳಿಸುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ವಿಜಯಕುಮಾರ್ ಹೇಳಿದರು.

ಬೈಂದೂರು ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಡೆದ ಹಿಂದೂ ಧರ್ಮಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ನಂತರ ರಣರಾಗಿಣಿ ಶಾಖೆ ವಕ್ತಾರೆ ರೇವತಿ ಮೊಗೇರ ಮಾತನಾಡಿ, ಇಂದು ಪ್ರತಿದಿನ ಹಿಂದೂ ಸ್ತ್ರೀಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಅಪಹರಣಗಳಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ, ಇದನ್ನು ತಡೆಗಟ್ಟಲು ಪ್ರತಿಯೊಬ್ಬ ಹಿಂದೂ ಮಹಿಳೆಯರು ಧರ್ಮಾಚರಣೆಯನ್ನು ಮಾಡಿ ಸ್ವಸಂರಕ್ಷಣೆಯನ್ನು ಕಲಿತು ರಣರಾಗಿಣಿಯರಾಗಬೇಕು. ಇದಕ್ಕೆ ರಣರಾಗಿಣಿ ಶಾಖೆಯವತಿಯಿಂದ ಸ್ವಸಂರಕ್ಷಣಾ ಪ್ರಶಿಕ್ಷಣವನ್ನೂ ಕಲಿಸಲಾಗುತ್ತಿದೆ, ಹಿಂದೂ ಸ್ತ್ರೀಯರು ಸ್ವಸಂರಕ್ಷಣೆಯನ್ನು ಕಲಿತು ಸಬಲೆಯರಾಗಿ ಎಂದು ಮಹಿಳೆಯರಿಗೆ ಕರೆನೀಡಿದರು.

ಬಳಿಕ ಸನಾತನ ಸಂಸ್ಥೆಯ ಶೋಭಾ ಕಾಮತ್ ಮಾತನಾಡಿ, ಕೇವಲ ಸಂವಿಧಾನದಲ್ಲಿ ಹಿಂದೂ ರಾಷ್ಟ್ರ ಎಂಬ ಶಬ್ಧ ಬಂದು ಅಥವಾ ಅಧಿಕಾರದಲ್ಲಿ ಪರಿವರ್ತನೆಯಾದರೆ ರಾಮರಾಜ್ಯದ ಅನುಭೂತಿ ಬರುವುದಿಲ್ಲ. ಅದಕ್ಕಾಗಿ ಮೊದಲು ಶಾಸನದಲ್ಲಿ ಮನೆ ಮಾಡಿರುವ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿರುವ ದುಷ್ಟ್ರಪ್ರವೃತ್ತಿಗಳ ವಿರುದ್ಧ ಜಾಗೃತವಾಗುವುದು ಅಗತ್ಯವಾಗಿದೆ. ಹಿಂದೂ ಸಂಸ್ಕೃತಿಯ ರಕ್ಷಣೆಯಾಗಲು ಪ್ರತಿಯೊಬ್ಬ ಹಿಂದೂಗಳು ಧರ್ಮಾಚರಣೆ ಮಾಡುವುದರ ಮೂಲಕ ಸಮಾಜದಲ್ಲಿ ಅನ್ಯಾಯದ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ರಾಜೇಂದ್ರ ನಾಯಕ್ ಸ್ವಾಗತಿಸಿ, ಭವ್ಯ ನಾಯಕ್ ವಂದಿಸಿದರು. ಈ ಸಂಧರ್ಭದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಸಾತ್ವಿಕ ಉತ್ಪಾದನೆಗಳ ಹಾಗೂ ಆಧ್ಯಾತ್ಮಿಕ ಗ್ರಂಥ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

Exit mobile version