Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು: ಮೀನುಗಾರಿಕಾ ಪುನರ್‌ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜನರ ಹಿತಕ್ಕಾಗಿ ಅನುಷ್ಟಾನಗೊಳಿಸುವ ಯೋಜನೆಗಳ ಪ್ರಯೋಜನ ಜನರಿಗೆ ತಲುಪುವ ಹಾಗೆ ಮಾಡುವುದರ ಮೂಲಕ ಯೋಜನೆಯ ಮೂಲ ಉದ್ಧೇಶವನ್ನು ಮನವರಿಕೆ ಮಾಡಬೇಕು. ಸರಕಾರ ಮೀನುಗಾರರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಮುದಾಯದ ಅಭಿವೃದ್ಧಿಗಾಗಿ ಅದು ಸದುಪಯೋಗವಾಗಬೇಕು ಎಂದು ಮೀನುಗಾರಿಕಾ, ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಶಿರೂರು ಅಳ್ವೆಗದ್ದೆ ಮೀನುಗಾರಿಕಾ ತಂಗುದಾಣದಲ್ಲಿ ರೂ.೨೮೦ ಲಕ್ಷ ವೆಚ್ಚದ ಮೀನುಗಾರಿಕಾ ಜೆಟ್ಟಿ ಪುನರ್‌ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನಡೆಸಿ ಮಾತನಾಡಿದರು. ಮೀನುಗಾರರಿಗೆ ೧೯೦ ಮನೆಗಳ ವಿತರಣೆ, ಸಮುದ್ರದಲ್ಲಿ ಅವಘಡ ಸಂಭವಿಸಿದರೆ ರೂ.೫ಲಕ್ಷ ಪರಿಹಾರ, ಈ ಭಾಗದ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ೩೧ ಕೋಟಿ ರೂಗಳ ಯೋಜನೆ ಸಿದ್ದಪಡಿಸಲಾಗಿದೆ. ವೃತ್ತಿನಿರತ ಮೀನುಗಾರರಿಗೆ ಬೋಟ್ ಮಾಡಲು ಸಾಧ್ಯತಾ ಪತ್ರ ವಿತರಿಸಲಾಗಿದೆ. ಹೀಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಎಲ್ಲಾ ಸಮುದಾಯದ ಪರ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರೂ ಅದು ಪ್ರಚಾರಕ್ಕೆ ಬಾರದ ಕಾರಣದಿಂದಾಗಿ ಜನರ ಗಮನಕ್ಕೆ ಬರಲು ವಿಳಂಬವಾಗುತ್ತಿದೆ. ಈ ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿ ಮನೆಗೂ ತೆರಳಿ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಪಕ್ಷವನ್ನು ಸಂಘಟಿಸುವಲ್ಲಿ ಶಾಸಕ ಗೋಪಾಲ ಪೂಜಾರಿಯವರೊಂದಿಗೆ ಕೈಜೋಡಿಸಬೇಕು ಎಂದರು.

ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಜಿಪಂ ಸದಸ್ಯ ಸುರೇಶ ಬಟ್ವಾಡಿ, ತಾಪಂ ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಮೌಲನ ದಸ್ತಗೀರ್, ಎಚ್. ವಿಜಯ್ ಶೆಟ್ಟಿ, ಗ್ರಾಪಂ ಅಧ್ಯಕ್ಷೆ ದಿಲ್‌ಶಾದ್ ಬೇಗಂ, ಉಪಾಧ್ಯಕ್ಷ ನಾಗೇಶ ಮೊಗೇರ ಅಳ್ವೆಗದ್ದೆ, ಕೆ.ಎಫ್.ಡಿ.ಸಿ ಆಡಳಿತ ನಿರ್ದೇಶಕ ವಿ.ಕೆ. ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಮಾಜಿ ಸದಸ್ಯ ಎಸ್. ಮದನ್ ಕುಮಾರ್, ಮೀನುಗಾರಿಕೆ ಇಲಾಖೆ ನಿರ್ದೇಶಕ ಹೆಚ್. ಎಸ್. ವೀರಪ್ಪ ಗೌಡ ಬೆಂಗಳೂರು, ಕಾರವಾರ ಬಂದರು ನಿರ್ದೇಶನಾಲಯದ ಅಧೀಕ್ಷಕ ಅಭಿಯಂತರ ಕೆ. ಎಸ್. ಜಂಬಾಳೆ, ಮೀನುಗಾರಿಕಾ ಜಂಟಿ ನಿರ್ದೇಶಕ ಗಣಪತಿ ಭಟ್, ಉಪನಿರ್ದೇಶಕ ಯು. ಮಹೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ನಾರಾಯಣ ಮೊಗೇರ ಅಳ್ವೆಗದ್ದೆ ಸ್ವಾಗತಿಸಿ, ಅರುಣ್ ಕುಮಾರ್ ಶಿರೂರು ವಂದಿಸಿದರು.

 

Exit mobile version