ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀಮದ್ಭಗವದ್ಗೀತೆಯು ವ್ಯಕ್ತಿತ್ವ ವಿಕಸನದಲ್ಲಿ ಔಚಿತ್ಯ ಪ್ರಜ್ಞೆಯನ್ನು ಬೋಧಿಸುತ್ತಾ ಸಂತುಲಿನ ಜೀವನ ಪದ್ಧತಿಯನ್ನು ಆಪೇಕ್ಷಿಸುತ್ತದೆ. ಅತಿಯಾದಲ್ಲಿ ಎಲ್ಲವೂ ನ್ಯೂನತೆಯಾಗುವುದರಿಂದ ಸಮಚಿತ್ತ, ಶುದ್ಧಚಾರಿತ್ಯ ಪ್ರತಿ ವ್ಯಕ್ತಿಯ ಆಂತರಿಕ ಮತ್ತು ಸಾಮಾಜಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿನ ಪ್ರಾಮುಖ್ಯತೆಯನ್ನು ಸಾರುತ್ತದೆ ಎಂದು ಯಳಜಿತ್ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಸಂತ ವೈ. ಮಂಗೇಶ ಶೆಣೈ ಹೇಳಿದರು.
ಬೈಂದೂರು ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನ ಮಹಾಸ್ವಾಮಿಗಳ ಪೀಠಾರೋಹಣ ರಜತ ವರ್ಷದ ಪ್ರಯುಕ್ತ ವಿವಿಧ ಶೃದ್ಧಾ ಕೇಂದ್ರಗಳಲ್ಲಿ ನಡೆದ ಸಪ್ತಾಹ ಗೀತಾಪಠಣ ಯಜ್ಞದ ಸಮರ್ಪಣಾ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಭಗವದ್ಗೀತೆ ನಿಜಾರ್ಥದಲ್ಲಿ ಒಂದು ಜಾತ್ಯಾತೀತ ಗ್ರಂಥವಾಗಿದ್ದು, ಅದು ಯಾವುದೇ ಒಂದು ಜನಾಂಗದ, ಜಾತಿಯ, ವರ್ಗದ, ದೇಶದ ಜನರನ್ನು ಉದ್ದೇಶಿಸಿ ಉಪದೇಶ ಮಾಡುವಂತಹದ್ದಲ್ಲ. ಎಲ್ಲಾ ಮಾನವರು ತಮ್ಮ ಉದ್ದಾರವನ್ನು ತಾವೇ ಮಾಡಿಕೊಳ್ಳಲು ಬೇಕಾದ ಜೀವನಕ್ರಮವನ್ನು ಮತ್ತು ಚಿಂತನಾ ಕ್ರಮಗಳನ್ನು ಕೊಡುತ್ತದೆ. ಗೀತೆಯ ಅಧ್ಯಯನದಿಂದ ನಮ್ಮ ಧರ್ಮ ಹಾಗೂ ಕರ್ತವ್ಯಗಳನ್ನು ಹೆಚ್ಚು ನಿಷ್ಟೆಯಿಂದ ಪಾಲಿಸುವಂತ ಮಾರ್ಗದರ್ಶನ ದೊರೆಯುತ್ತದೆ. ಕಾಲಾಬಾಧಿತವಾಗದೇ ಇಂದಿಗೂ ಸೂತ್ರಪ್ರಾಯವಾಗಿರುವ ಹಾಗೂ ನಮ್ಮ ದಿನನಿತ್ಯದ ಬದುಕಿಗೂ ಬೆಳಕು ನೀಡುವಂತಹ ಈ ಕಿರು ಗ್ರಂಥ ವಿಶ್ವ ಮಾನ್ಯವಾಗಿದೆ ಎಂದರು.
ಆಚರಣಾ ಸಮಿತಿ ಅಧ್ಯಕ್ಷ ಬಿಜೂರು ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆವಹಿಸಿದ್ದರು. ಸಪ್ತಾಹ ಗೀತಾ ಪಠಣ ಯಜ್ಞದಲ್ಲಿ ಭಾಗವಹಿಸಿದ ಕೇಂದ್ರ ನಿರ್ವಾಹಕರು ಮತ್ತು ಪಠಣಕಾರರಿಗೆ ಪ್ರಶಂಸಾ ಪತ್ರ ನೀಡಲಾಯಿತು. ಬೈಂದೂರು ಶಿಕ್ಷಣ ವಲಯದ ವಿವಿಧ ಸಂಪನ್ಮೂಲ ಕೇಂದ್ರಗಳಲ್ಲಿ ನಡೆದ ಸ್ಪರ್ಧೆಯ ವಿಜೇತ ಮತ್ತು ಕೇಂದ್ರದಲ್ಲಿ ನಡೆದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ, ಉಪಾಧ್ಯಕ್ಷರಾದ ಯು. ರಮೇಶ ವೈದ್ಯ, ಹೇರಂಜಾಲು ನಾಗೇಶ ರಾವ್, ಗೋವಿಂದ ಎಂ., ಸ್ಪರ್ಧಾ ಸಮಿತಿ ಮುಖ್ಯಸ್ಥ ಬಿಜೂರು ವಿಶ್ವೇಶ್ವರ ಅಡಿಗ, ಸಮಿತಿಯ ಜಿಲ್ಲಾ ಪ್ರತಿನಿಧಿಗಳಾದ ಜಿ.ಆರ್.ಹೆಗಡೆ, ಭಾಸ್ಕರ್ ಹೆಗಡೆ, ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಬಿ. ಗೋಪಾಲ ನಾಯಕ್, ಮಾತೃಮಂಡಳಿ ಅಧ್ಯಕ್ಷೆ ಆಶಾ ಪಟವಾಲ್, ಪ್ರಾ.ಶಾ.ಶಿ.ಸಂಘದ ಜಿಲ್ಲಾಧ್ಯಕ್ಷ ಶಶಿಧರ ಶೆಟ್ಟಿ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ಎಚ್. ನಾಯ್ಕ್ ಸ್ವಾಗತಿಸಿ, ಮಂಜುನಾಥ ಎಂ ವಂದಿಸಿದರು. ಆಶಾ ದಿನೇಶ್, ಭಾರತಿ ಮಂಜುನಾಥ್, ಲಲಿತಾ ನಿರೂಪಿಸಿದರು.