ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉತ್ತಮ ಸಮಾಜ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಸಂಘಟನೆಗಳು ಅನಿವಾರ್ಯ. ಯುವಶಕ್ತಿ ದೇಶದ ಬೆನ್ನೆಲುಬಾಗಿದ್ದು, ಬದಲಾದ ಕಾಲಘಟ್ಟದಲ್ಲಿ ಸಮಾಜದ ಬಗ್ಗೆ ಸದಾ ಕಳಕಳಿ ಹೊಂದಿದ ಜೊತೆಗೆ ಸೇವಾ ಮನೋಭಾವನೆಯಿರುವ ಯುವ ಸಂಘಟನೆಗಳು ಕೈಜೋಡಿಸಿ ಭಾವೈಕ್ಯತೆಯಿಂದ ಕೂಡಿದ ಸುಂದರ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಉಪ್ಪುಂದ ರಥಬೀದಿಯ ಶ್ರೀದುರ್ಗಾ ಫ್ರೆಂಡ್ಸ್‌ನ ಐದನೇ ವರ್ಷದ ವಾರ್ಷಿಕೋತ್ಸವ ಹಾಗೂ ಉಪ್ಪುಂದ ಕೊಡಿಹಬ್ಬದ ಪ್ರಯುಕ್ತ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಂತರ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಸ್ಥಳಿಯ ಯುವ ಸಾಹಿತಿ, ಕವಿ ಜಗದೀಶ ದೇವಾಡಿಗ ಇವರನ್ನು ಸನ್ಮಾನಿಸಿದರು. ಸಾಮೂಹಿಕತೆ ಇರಲಿ ಎಂಬ ಕಲ್ಪನೆಯಲ್ಲಿ ನಮ್ಮ ಹಿರಿಯರು ದೇವಾಲಯಗಳನ್ನು ನಿರ್ಮಾಣ ಮಾಡಿದರು. ನಂಬಿಕೆಯ ಆಧಾರದಿಂದ ಸಮಾಜ ನಡೆದುಬಂದಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ವಿಶ್ವಾಸದ ಬದುಕನ್ನು ಸಾಗಿಸಬೇಕು. ಸಂಘಟನೆಗಳಿಂದ ದೇವಸ್ಥಾನ, ಸಮಾಜ ಹಾಗೂ ಊರಿನ ಪರವಾದ ಸೇವಾ ಚಟುವಟಿಕೆ ನಿರಂತರವಾಗಿ ನಡೆಯುತ್ತಿರಬೇಕು ಎಂದರು.
ಉಪ್ಪುಂದ ಗ್ರಾಪಂ ಸದಸ್ಯ ಯು. ಎ. ಮಂಜು ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ಅಖಿಲ ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘದ ಅಧ್ಯಕ್ಷ ನವೀನಚಂದ್ರ ಉಪ್ಪುಂದ, ಕೊಲ್ಲೂರು ಡಾಟ್‌ಕಾಂ ಸಂಯೋಜಕಿ ಪ್ರಿಯದರ್ಶಿನಿ, ತಾಲೂಕು ರೈತಸಂಘದ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್, ತಾರಾಪತಿ ಮೀನುಗಾರ ಸಂಘದ ಅಧ್ಯಕ್ಷ ಎ. ಆನಂದ ಖಾರ್ವಿ, ವಲಯ ನಾಡದೋಣಿ ಮೀನುಗಾರ ಸಂಘದ ನಿಕಟಪೂರ್ವ ಅಧ್ಯಕ್ಷ ಕುಮಾರ್ ಖಾರ್ವಿ ಬಿಎಚ್‌ಕೆ, ಗ್ರಾಪಂ ಮಾಜಿ ಅಧ್ಯಕ್ಷ ಜಗನ್ನಾಥ ಎಂ., ಬೈಂದೂರು ಘಟಕ ವಿಹಿಂಪ ಅಧ್ಯಕ್ಷ ಶ್ರೀಧರ ಬಿಜೂರ್ ಉಪಸ್ಥಿತರಿದ್ದರು. ನಾರಾಯಣರಾಜು ನಿರೂಪಿಸಿ, ಮಂಜು ದೇವಾಡಿಗ ವಂದಿಸಿದರು.