Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ನ್ಯಾಯಾಧೀಶೆ ಶ್ರೀಮತಿ ಪ್ರೀತ್ ಜೆ. ಅವರಿಗೆ ಬೀಳ್ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಿನ್ಸಿಪಾಲ್ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಧೀಶೆ ಪ್ರೀತ್ ಜೆ ರವರನ್ನು ಕುಂದಾಪುರ ಬಾರ್ ಅಸೋಷಿಯೇಶನ್ ವತಿಯಿಂದ ಬೀಳ್ಕೊಡಲಾಯಿತು. ಅವರು ಕುಂದಾಪುರದ ನ್ಯಾಯಾಲಯದಲ್ಲಿ ಒಂದೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಇದೀಗ ಸೀನಿಯರ್ ಸಿವಿಲ್ ಜಡ್ಜ್ ಆಗಿ ಪದೋನ್ನತಿ ಹೊಂದಿ ಶಿಕಾರಿಪುರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದರು.

ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ನ್ಯಾಯಧೀಶೆ ಪ್ರೀತ್ ಜೆ, ಯಾವುದೇ ನ್ಯಾಯಾಲಯದಲ್ಲಿ ವಕೀಲರ ಕಡೆಯಿಂದ ಉತ್ತಮ ಕ್ರಿಯೆ ಬಂದರೆ ನ್ಯಾಯಾಧೀಶರ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತದೆ. ಆ ನಿಟ್ಟಿನಲ್ಲಿ ಒಂದೂವರೆ ವರ್ಷ ಕುಂದಾಪುರದಲ್ಲಿ ನೀಡಿದ ಸೇವೆ ತುಂಬಾ ಸಂತೋಷ ನೀಡಿದೆ. ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಹುಲಿ-ಸಿಂಹಗಳಂತಹ ವಕೀಲರ ವಾದವನ್ನು ಕೇಳುವಂತಹ ಒಂದು ಸೌಭಾಗ್ಯ ಕುಂದಾಪುರದಲ್ಲಿ ನನಗೆ ದೊರಕಿದೆ. ಕುಂದಾಪುರದ ಯಾವುದೇ ವಕೀಲರಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆಯನ್ನು ನಾನು ಕಂಡಿಲ್ಲ. ಆದುದರಿಂದ ಕುಂದಾಪುರದ ವಕೀಲರು ನೀಡಿದ ಪ್ರೀತಿ ವಿಶ್ವಾಸಕ್ಕೆ ಎಂದಿಗೂ ಚಿರ ಋಣಿಯಾಗಿರುತ್ತೇನೆ ಎಂದರಲ್ಲದೆ ಸಹೋದ್ಯೋಗಿ ನ್ಯಾಯಾಧೀಶರ ಸಹಕಾರ ನೆನಪಿಸಿಕೊಂಡರು.

ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಹಿರಿಯ ವಕೀಲರಾದ ಜಿ. ಸಂತೋಷ ಕುಮಾರ್ ಶೆಟ್ಟಿ, ಟಿ.ಬಿ.ಶೆಟ್ಟಿ ಮತ್ತು ಎಂ.ಸದಾನಂದ ಶೆಟ್ಟಿ ನ್ಯಾಯಾಧೀಶರಿಗೆ ಗೌರವಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಮತ್ತು ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಲಾವಣ್ಯ ಎಚ್. ಎನ್ ಉಪಸ್ಥಿತರಿದ್ದು, ಮೆಚ್ಚುಗೆಯ ಮಾತುಗಳನ್ನಾಡಿದರು. ಹಿರಿಯ ನ್ಯಾಯವಾದಿಗಳಾದ ಜಿ ಸಂತೋಷ್ ಕುಮಾರ್ ಶೆಟ್ಟಿ, ರವಿಕಿರಣ್ ಮುರ್ಡೆಶ್ವರ, ಟಿ.ಬಿ.ಶೆಟ್ಟಿ, ಕೆ.ಸಿ.ಶೆಟ್ಟಿ, ಕಾಳಾವರ ಪ್ರದೀಪ್ ಶೆಟ್ಟಿ, ಕೆ.ಕುಸುಮಾಕರ ಶೆಟ್ಟಿ ಮತ್ತು ಸಹಾಯಕ ಸರಕಾರಿ ಅಭಿಯೋಜಕರಾದ ಸುಮಂಗಲಾ ನಾಯಕ್ ಮುಂತಾದವರು ನ್ಯಾಯಾಧೀಶರ ಸೇವೆಯನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯವಾದಿ ಹೆಬ್ರಿ ಪ್ರಸನ್ನ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಸ್ವಾಗತಿಸಿದರು. ವಕೀಲರಾದ ಧನಂಜಯ ಶೆಟ್ಟಿ ಪ್ರಾರ್ಥಿಸಿದರು. ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಶಿರಿಯಾರ ಮುರಳೀಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಎಚ್. ರವೀಶ್ಚಂದ್ರ ಶೆಟ್ಟಿ ವಂದಿಸಿದರು.

Exit mobile version