Kundapra.com ಕುಂದಾಪ್ರ ಡಾಟ್ ಕಾಂ

ಕಠಿಣ ಪರಿಶ್ರಮ, ಛಲದಿಂದ ಸಾಧನೆ: ವಿಜ್ಞಾನಿ ಭಾಸ್ಕರ್ ಮಂಜ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಠಿಣ ಪರಿಶ್ರಮ, ತಾಳ್ಮೆ, ಸಾಧಿಸುವ ಛಲವಿದ್ದರೆ ಸಮಾಜದ ಯಾವುದೇ ವ್ಯಕ್ತಿ ನಿಶ್ಚಯಿಸಿದ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದು ಬೆಂಗಳೂರು ಭಾರತೀಯ ಇಸ್ರೋ ಸಂಸ್ಥೆಯ ವಿಜ್ಞಾನಿ ಭಾಸ್ಕರ್ ಮಂಜ ಹೇಳಿದರು.

ನಾಯ್ಕನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿವೆ. ಎಳೆಯ ಪ್ರಾಯದಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಭವಿಷ್ಯದ ಉತ್ತಮ ನಾಗರೀಕರನ್ನಾಗಿ ರೂಪಿಸಬಹುದು. ದೇಶದ ಪ್ರತಿಯೊಬ್ಬರಿಗೂ ಸಮರ್ಪಕ ಶಿಕ್ಷಣ ದೊರೆತಾಗ ಮಾತ್ರ ದೇಶ ಅಭಿವೃದ್ಧಿ ಕಾಣಬಹುದಾಗಿದೆ. ವಿದ್ಯೆಯೊಂದಿಗೆ ಮಾನಸಿಕ ಧೃಡತೆ, ಆರೋಗ್ಯ, ಸಮಯಪ್ರಜ್ಞೆ, ಏಕಾಗ್ರತೆ ಹಾಗೂ ಆತ್ಮವಿಶ್ವಾಸವನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕೆರ್ಗಾಲು ಗ್ರಾಪಂ ಅಧ್ಯಕ್ಷೆ ಸೋಮು ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ವಿಜ್ಞಾನಿ ಭಾಸ್ಕರ್ ಮಂಜ ಮತ್ತು ಅನುರಾಧ ದಂಪತಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮನ ವಿತರಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಸುಂದರ್ ಕೊಠಾರಿ, ಉದ್ಯಮಿ ಶಂಕರ ಭಂಡಾರ್‌ಕರ್, ಎಸ್‌ಡಿಎಂಸಿ ಅಧ್ಯಕ್ಷ ರಾಜು ಪೂಜಾರಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ ಕೊಠಾರಿ, ಕಾರ್ಯದರ್ಶಿ ಜಗದೀಶ ಪೂಜಾರಿ, ಮಾಜಿ ಅಧ್ಯಕ್ಷ ಹೆರಿಯ ಪೂಜಾರಿ, ಸಿಆರ್‌ಪಿ ಸುಬ್ರಹ್ಮಣ್ಯ ಉಪ್ಪುಂದ ಉಪಸ್ಥಿತರಿದ್ದರು.

ಶಾಲಾ ಮುಖ್ಯಶಿಕ್ಷಕ ಬಿ. ಈಶ್ವರ ಶೇರೆಗಾರ್ ಸ್ವಾಗತಿಸಿ, ನಾಗರತ್ನ ವಂದಿಸಿದರು. ತಿಮ್ಮಪ್ಪ ಗಾಣಿಗ ನಿರೂಪಿಸಿದರು. ನಂತರ ಶಾಲಾ ಮಕ್ಕಳಿಂದ, ಹಳೆವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಪ್ರದರ್ಶನಗೊಂಡಿತು.

Exit mobile version