Kundapra.com ಕುಂದಾಪ್ರ ಡಾಟ್ ಕಾಂ

ವಂಡ್ಸೆ: ಗ್ರಾಮ ವಿಕಾಸ ಯೋಜನೆ ಕಾಮಗಾರಿಗಳಿಗೆ ಶಿಲಾನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ರಾಜ್ಯಮಟ್ಟದಲ್ಲಿ ನೀಡಲಾಗುವ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವುದು ಹೆಮ್ಮೆಯ ವಿಚಾರ. ಈ ಪುರಸ್ಕಾರ ಇನ್ನಷ್ಟು ಪ್ರಗತಿಗೆ ಸ್ಪೂರ್ತಿಯಾಗಲಿ. ಗ್ರಾಮ ವಿಕಾಸ ಯೋಜನೆ ವಂಡ್ಸೆ ಪಂಚಾಯತ್‌ಗೆ ದೊರಕಿದ್ದು, ಬಹುತೇಕ ಬೇಡಿಕೆಗಳು ಇದರ ಮೂಲಕ ಈಡೇರಲಿವೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

ಅವರು ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ೭೫ ಲಕ್ಷ ರೂಪಾಯಿ ವೆಚ್ಚದ ಗ್ರಾಮ ವಿಕಾಸ ಯೋಜನೆಯನ್ವಯ ಕಾರ್ಯಗತಗೊಳ್ಳಲಿರುವ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚುತ್ತಿರುವ ಈ ಸಂದರ್ಭದಲ್ಲಿ ವಂಡ್ಸೆಯ ಸರ್ಕಾರಿ ಶಾಲೆ ಎಲ್.ಕೆಜಿ ಯುಕೆಜಿ ಆಂಗ್ಲ ಮಾಧ್ಯಮದಲ್ಲಿ ೧ನೇ ತರಗತಿ ಆರಂಭಿಸುವ ಮೂಲಕ ಮಾದರಿಯಾಗಿ ಮೂಡಿಬಂದಿದೆ. ಈ ಮಾದರಿಯನ್ನೇ ಬಹುತೇಕ ಸರ್ಕಾರಿ ಶಾಲೆಗಳು ಮಾಡಲು ಮುಂದಾಗಿವೆ. ಸರ್ಕಾರಿ ಶಾಲೆಯನ್ನು ಉಳಿಸುವಲ್ಲಿನ ಪ್ರಯತ್ನ ಅನುಕರಣೀಯ ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಗ್ರಾ.ಪಂ.ಸದಸ್ಯರಾದ ಗುಂಡು ಪೂಜಾರಿ ಹರವರಿ, ಉದಯ ಕೆ.ನಾಯ್ಕ್, ಸಿಂಗಾರಿ ಪೂಜಾರಿ, ಲಕ್ಷ್ಮೀ ಆತ್ರಾಡಿ, ಮಲ್ಲಿಕಾ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ವಂಡಬಳ್ಳಿ ಜಯರಾಮ ಶೆಟ್ಟಿ, ವಿ.ಕೆ.ಶಿವರಾಮ ಶೆಟ್ಟಿ, ಸಂಜೀವ ಪೂಜಾರಿ, ಶ್ರೀನಿವಾಸ ಪೂಜಾರಿ, ಪಂಚಾಯತ್ ನೊಡಲ್ ಅಧಿಕಾರಿ ಡಾ|ಪ್ರಕಾಶ್, ವಂಡ್ಸೆ ವ್ಯ.ಸೇ.ಸ.ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ತ್ಯಾಂಪಣ್ಣ ಶೆಟ್ಟಿ ಉಪಸ್ಥಿತರಿದ್ದರು.

ಗ್ರಾಮ ವಿಕಾಸ ಯೋಜನೆಯಲ್ಲಿ ೬ಲಕ್ಷ, ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ೫ ಲಕ್ಷದಲ್ಲಿ ವಂಡ್ಸೆ ಕಾನಮ್ಮ (ವನದುರ್ಗಾ) ದೇವಸ್ಥಾನ ರಸ್ತೆಯಲ್ಲಿ ನಿರ್ಮಾಣವಾಗಲಿರುವ ಕಿರು ಸೇತುವೆಗೆ ಶಾಸಕ ಕೆ.ಗೋಪಾಲ ಪೂಜಾರಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ವಂಡ್ಸೆ-ಬಳಗೇರಿ ಪರಿಶಿಷ್ಟ ಪಂಗಡ ರಸ್ತೆ, ಮೂಕಾಂಬಿಕಾ ಜನತಾ ಕಾಲೋನಿ ರಸ್ತೆ , ವಂಡ್ಸೆ ಶಾಲೆ ರಸ್ತೆ ಕಾಂಕ್ರೀಟಿಕರಣ, ಸಮುದಾಯ ಭವನ, ವಂಡ್ಸೆ ಶಾಲೆ ಆಟದ ಮೈದಾನ ಅಭಿವೃದ್ಧಿ, ನೂಜಾಡಿ ಕ್ರಾಸ್ ಸರ್ಕಾರಿ ಭೂಮಿ ಸಮತ್ತಟ್ಟುಗೊಳಿಸುವಿಕೆ, ಸೋಲಾರ್ ದಾರಿದೀಪ ಅಳವಡಿಕೆ, ಘನತ್ಯಾಜ್ಯ ವಿಲೇವಾರಿ ಘಟಕರಚನೆ, ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನ ಒಳ ಪೌಳಿ ರಚನೆಗೆ ಅನುದಾನ, ವನದುರ್ಗಾ ಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ, ಹರವರಿ ಚಿತ್ತೇರಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ, ಮಾವಿನಕಟ್ಟೆ ಜುಮ್ಮಾ ಮಸೀದಿ ಆವರಣ ಗೋಡೆ ನಿರ್ಮಾಣಕ್ಕೆ ಅನುದಾನ, ವಿಡಿಯೋ ಕಾನ್ಫರೇನ್ಸ್ ಸಂವಹನ ಉಪಕರಣ ಖರೀದಿಗೆ ಹಣವನ್ನು ವಿಂಗಡಿಸಲಾಯಿತು.

ಈ ಸಂದರ್ಭದಲ್ಲಿ ಪ.ಜಾ.ಪ.ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಶಿಕ್ಷಣ ಪರಿಕರ, ೨೧ ಪ.ಜಾ.ಪ.ಪಂಗಡದ ಕುಟುಂಬಗಳಿಗೆ ಸೋಲಾರ್ ದೀಪ, ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಿಸಲಾಯಿತು. ವಂಡ್ಸೆ ಗ್ರಾ.ಪಂ.ನಲ್ಲಿ ಅಭೀವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದ ಎಚ್.ವಿ.ಇಬ್ರಾಹಿಂಪುರ್ ಅವರನ್ನು ಸನ್ಮಾನಿಸಲಾಯಿತು. ನಾಗರಾಜ ಸ್ವಾಗತಿಸಿದರು. ಪಂ.ಅಭಿವೃದ್ಧಿ ಅಧಿಕಾರಿ ಶಂಕರ್ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version