ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನೂತನವಾಗಿ ನೇಮಕಗೊಂಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ ನಾಯ್ಕ್ ಟಿ ಅವರಿಗೆ ಕುಂದಾಪುರ ಬಾರ್ ಅಸೋಸಿಯೇಶನ್ ಕುಂದಾಪುರ ಇದರ ವತಿಯಿಂದ ಸ್ವಾಗತ ಕಾರ್ಯಕ್ರಮ ಕೋರ್ಟ್ ಸಭಾಂಗಣದಲ್ಲಿ ನಡೆಯಿತು.
ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಟಿ, ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿದ ಐದು ವರ್ಷಗಳಲ್ಲಿ ಈ ದಿನ ನನಗೆ ಹೆಚ್ಚು ಸ್ಮರಣೀಯವಾದುದು. ಕಾನೂನಿನ ಪರವಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಪ್ರದೇಶಗಳು ಮುಖ್ಯವಲ್ಲ ಬದಲಾಗಿ ಅಂತಹ ಮನಸ್ಥಿತಿ ಮುಖ್ಯ ಎಂದರು.
ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆಯವರು ನೂತನ ನ್ಯಾಯಾಧೀಶರನ್ನು ಸ್ವಾಗತಿಸಿ, ವಕೀಲರ ಸಂಘಕ್ಕೆ ನೂತನ ಕಟ್ಟಡದ ಪ್ರಕ್ರಿಯೆ ನಡೆಯುತ್ತಿದ್ದು ಆದಷ್ಟು ಶೀಘ್ರದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ ನೂತನ ಕಟ್ಟಡವನ್ನು ರಚಿಸಲು ಸಹಕಾರ ನೀಡುವಂತೆ ಕೋರಿದರು.
ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜಶೇಖರ ವಿ ಪಾಟೀಲ್, ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀ ಲಾವಣ್ಯ ಎಚ್. ಎನ್. ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಎಚ್.ರವೀಶ್ಚಂದ್ರ ಶೆಟ್ಟಿ ವಂದಿಸಿದರು. ಮಾಜಿ ಉಪಾಧ್ಯಕ್ಷರಾದ ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮ ನಿರೂಪಿಸಿದರು.