ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಹೋಬಳಿಗಳಲ್ಲೂ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲಾಗುವುದು. ಶಾಲೆಯ ಕಟ್ಟಡ ಮತ್ತಿತರ ಮೂಲ ಸೌಲಭ್ಯಗಳನ್ನು ತಲಾ ರೂ ೧೫ ಲಕ್ಷ ಮೊತ್ತದಲ್ಲಿ ಆರಂಭದ ಹಂತದಲ್ಲೇ ಸೃಷ್ಟಿಸಿ ಅವುಗಳಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಹೇರಂಜಾಲಿನಲ್ಲಿ ರೂ೫.೫೩ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡ, ಬಾಲಕ ಬಾಲಕಿಯರ ವಸತಿಗೃಹ, ಅಡುಗೆಮನೆ ಹಾಗೂ ಭೋಜನಾಲಯ ಸಂಕೀರ್ಣವನ್ನು ಉದ್ಘಾಟಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.
ಸಮಾಜದ ಅವಕಾಶ ವಂಚಿತರಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಸಮುದಾಯದ ಆಸ್ತಿಯಾಗಿ ರೂಪಿಸುವುದು ಇಲಾಖೆಯ ಅಧೀನದ ಮೊರಾರ್ಜಿ ದೇಸಾಯಿ ಶಾಲೆಗಳ ಉದ್ದೇಶ. ಇಲ್ಲಿ ಕಲಿಯುವ ಮಕ್ಕಳಿಗೆ ಶಾಲಾ ಸಮವಸ್ತ್ರ, ಪುಸ್ತಕಗಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಪೂರೈಸಲಾಗುತ್ತಿದೆ. ಅವರ ಪ್ರತಿನಿಧಿಗಳೇ ಆಯ್ಕೆ ಮಾಡಿದ ಸಮವಸ್ತ್ರ ನಿಗದಿಗೊಳಿಸಿದೆ ಎಂದರು. ಹೇರಂಜಾಲು ಶಾಲೆಯಲ್ಲಿನ ಎಲ್ಲ ಕೊರತೆಗಳನ್ನು ಇನ್ನು ಒಂದು ತಿಂಗಳೊಳಗೆ ನೀಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ತಾಲ್ಲೂಕು ಪಂಚಾಯತ್ ಸದಸ್ಯರಾದ ಮಹೇಂದ್ರ ಪೂಜಾರಿ, ವಿಜಯಕುಮಾರ ಶೆಟ್ಟಿ, ಖಂಬದಕೋಣೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ ದೇವಾಡಿಗ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಸಮಾಜ ಕಲ್ಯಾಣ ಇಲಾಖೆಯ ಸಲಹೆಗಾರ ವೆಂಕಣ್ಣಯ್ಯ, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹರೀಶ ಎಲ್. ಗಾಂವ್ಕರ್, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ. ಎಸ್. ಶ್ರೀಧರ, ಪೋಷಕ-ಶಿಕ್ಷಕರ ಪರಿಷತ್ತಿನ ಅಧ್ಯಕ್ಷ ಗಣೇಶ ಪೂಜಾರಿ, ಮುಖ್ಯೋಪಾಧ್ಯಾಯ ನಾಗರಾಜ್, ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಶಿಕ್ಷಕಿ ಕಮಲಾ ಕೆ. ವಿ ಸ್ವಾಗತಿಸಿದರು. ದೀಪಾ ನಾಯ್ಕ್ ನಿರೂಪಿಸಿ ವಂದಿಸಿದರು.