Kundapra.com ಕುಂದಾಪ್ರ ಡಾಟ್ ಕಾಂ

ಬಸ್ರೂರು: ಮನಸೂರೆಗೊಳಿಸಿದ ಆಳ್ವಾಸ್ ಸಾಂಸ್ಕೃತಿಕ ವೈಭವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಸ್ರೂರು ಸರಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘ, ಬಸ್ರೂರು ಸರಕಾರಿ ಪ್ರೌಡಶಾಲೆ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಬಸ್ರೂರು ಶಾಲಾ ಮೈದಾನದಲ್ಲಿ ಅದ್ದೂರಿಯಾಗಿ ಜರಗಿತು.

ಆಳ್ವಾಸ್ ನುಡಿಸಿರಿ ವಿರಾಸತ್ ಕುಂದಾಪುರ ಘಟಕದ ಗೌರವಾಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಐವತ್ತೊಂಬತ್ತು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಬಸ್ರೂರು ಸರಕಾರಿ ಪ್ರೌಡಶಾಲೆ ಇಂದು ಆಳ್ವಾಸ್ ಸಾಂಸ್ಕೃತಿಕ ವೈಭವದಿಂದ ಕಂಗೊಳಿಸುತ್ತಿದೆ. ಬಸ್ರೂರಿನಂತಹ ಗ್ರಾಮೀಣ ಪ್ರದೇಶದ ಈ ಪ್ರೌಢಶಾಲಾ ವಿದ್ಯಾರ್ಥಿಗಳು ರ‍್ಯಾಂಕ್ ಪಡೆದು ಉನ್ನತ ಸ್ಥಾನಕ್ಕೇರಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿ ಇಂದು ಆಳ್ವಾಸ್ ಸಾಂಸ್ಕೃತಿಕ ವೈಭವವನ್ನು ಬಸ್ರೂರಿನಲ್ಲಿ ಏರ್ಪಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಮುಂದಿನ ವರ್ಷ ವಜ್ರ ಮಹೋತ್ಸವವನ್ನು ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸುವ ಮುನ್ನುಡಿಯಾಗಿ ಈ ಕಾರ್ಯಕ್ರಮ ಮೂಡಿಬಂದಿದೆ ಎಂದವರು ಅಭಿಪ್ರಾಯಪಟ್ಟರು.

ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ ಆಳ್ವ ಅವರು ಆಶಯ ಭಾಷಣ ಮಾಡಿ ಕುಂದಾಪುರದ ಮತ್ತು ಬಸ್ರೂರಿನ ಬಗ್ಗೆ ಹೆಮ್ಮೆಯ ಭಾವವಿದೆ. ಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ನಮ್ಮ ಸಂಸ್ಕೃತಿಯ ಬೇರುಗಳನ್ನು ಕಾಣಬಹುದಾಗಿದೆ, ಭಾರತೀಯ ಸನಾತನ ಕಲೆಗಳು ಇಲ್ಲಿ ಅನಾವರಣಗೊಳ್ಳಲಿದೆ ಎಂದರು.

ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ವಿ.ಬಾಲಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಸ್ರೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಎಚ್., ಉದ್ಯಮಿ ಆನಂದ ಸಿ. ಕುಂದರ್, ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಡಾ| ಬಿ.ವಿ.ಉಡುಪ, ಆಳ್ವಾಸ್ ನುಡಿಸಿರಿ ವಿರಾಸತ್ ಕುಂದಾಪುರ ಘಟಕದ ಅಧ್ಯಕ್ಷ ಡಾ| ಉಮೇಶ್ ಪುತ್ರನ್, ಕೋಟೇಶ್ವರ ಯುವ ಮೆರಿಡಿಯನ್‌ನ ಉದಯ ಕುಮಾರ್ ಶೆಟ್ಟಿ, ಉದ್ಯಮಿ ಆನಗಳ್ಳಿ ಕರುಣಾಕರ ಹೆಗ್ಡೆ, ನಿವೃತ್ತ ಮುಖ್ಯೋಪಾಧ್ಯಾಯ ವೀರಣ್ಣ ಶೆಟ್ಟಿ, ಸುರೇಶ್ ಅಡಿಗ, ಬಸ್ರೂರು ಗಣೇಶ್ ಪಡಿಯಾರ್, ವಿಜಯಾನಂದ ಶೆಟ್ಟಿ , ಅಬ್ದುಲ್ ಮುನಾಫ್, ಆಳ್ವಾಸ್ ನುಡಿಸಿರಿ ವಿರಾಸತ್ ಕುಂದಾಪುರ ಘಟಕದ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಶಾಧಿಕಾರಿ ವಿಶ್ವನಾಥ ಕರಬ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಾಜೇಂದ್ರ ಶೆಟ್ಟಿಗಾರ್ ಸ್ವಾಗತಿಸಿದರು. ವಿದ್ವಾನ್ ಮಾಧವ ಅಡಿಗ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಆಚಾರ್ಯ ವಂದಿಸಿದರು. ನಂತರ ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರಗಿತು.

ಚಿತ್ರಗಳು: ಮಧುರಾ ಸ್ವುಡಿಯೋ

Exit mobile version