Kundapra.com ಕುಂದಾಪ್ರ ಡಾಟ್ ಕಾಂ

ಬಿಲ್ಲವ ಸಂಘ ಕುವೈತ್ – ಹೊರಾಂಗಣ ವಿಹಾರಕೂಟ

ಕುವೈತ್: ಬಿಲ್ಲವ ಸಂಘದ ಹೊರಾಂಗಣ ವಿಹಾರಕೂಟವನ್ನು ಶುಕ್ರವಾರದಂದು ಬಹು ಸಂಖ್ಯೆಯಲ್ಲಿ ಬಿಲ್ಲವರೆಲ್ಲರು ಒಂದುಗೂಡಿ ಮಿಶ್ರೆಫ್ ಉದ್ಯಾನವನದಲ್ಲಿ ನಡೆಸಿಕೊಟ್ಟರು. ಹಿತಕರವಾದ ಹವಾಮಾನ ಕಾರ್ಯಕ್ರಮವನ್ನು ಅದ್ಧೂರಿಯಿಂದ ನಡೆಸಲು ಮತ್ತು ಎಲ್ಲಾ ಸದಸ್ಯರು ಅತ್ಯುತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಲು ಉತ್ತೇಜನವನ್ನು ನೀಡಿತು.

ಸಮಾರಂಭವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ಯಕ್ಷರಾದ ಶ್ರೀ ಚಿತ್ರೇಕ್ ಬಂಗೇರರವರು ವಿಶಿಷ್ಟವಾದ ಪರಿಕಲ್ಪನೆಯಾದ ಹಾಲು ಮತ್ತು ಜೇನನ್ನು ಮಿಶ್ರಣ ಮಾಡುವುದರೊಂದಿಗೆ ನೆಡೆಸಿದರು. ಇದು ಸಾಂಪ್ರದಾಯಿಕ ಅವಿಭಕ್ತ ಕುಟುಂಬದ ಸಂಕೇತವಾಗಿದೆ. ಭಗವಂತನಿಗೆ ಹಾಲು-ಜೇನಿನ ಮಿಶ್ರಣವು ತುಂಬಾ ಪ್ರಿಯ. ಅದೇ ರೀತಿ ಜನರು ಹೊಂದಿಕೊಂಡು ಸಾಮರಸ್ಯದಿಂದ ಹಾಲು ಜೇನಿನ ಮಿಶ್ರಣದಂತೆ ಬಾಳಬೇಕೆಂದು ಭಗವಂತನು ಬಯಸುತ್ತಾನೆ ಎನ್ನುವುದೇ ಈ ಪರಿಕಲ್ಪನೆಯೆ ಸಂದೇಶವಾಗಿದೆ.

ಕ್ರೀಡಾ ಕಾರ್ಯದರ್ಶಿಯಾದ ಶ್ರೀ ಕೃಷ್ಣ ಪೂಜಾರಿಯವರು ರಿಬ್ಬನ್ ಕತ್ತರಿಸುವುದರೊಂದಿಗೆ ಮತ್ತು ಅಧ್ಯಕ್ಷರಾದ ಶ್ರೀ ಚಿತ್ರೇಕ್ ಬಂಗೇರರವರು ತೆಂಗಿನ ಕಾಯಿ ಒಡೆಯುವ ಮೂಲಕ ಕ್ರೀಡೋತ್ಸವವನ್ನು ಚಾಲನೆಗೊಳಿಸಿದರು. ಮಕ್ಕಳಿಗಾಗಿ ಹಾಗೂ ಎಲ್ಲಾ ಹರೆಯದ ಪುರುಷರು ಮತ್ತು ಮಹಿಳೆಯರಿಗಾಗಿ ಹಲವು ಆಟೋಟ, ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಬಿಲ್ಲವ ಸಂಘ ಕುವೈತ್ ತನ್ನ ಸದಸ್ಯರಿಗಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಮಾರ್ಚ್ 13 ರಂದು ಅಬ್ಬಾಸಿಯ ಮೈದಾನದಲ್ಲಿ ನಡೆಸಿದ್ದರು. ಇದರ ವಿಜೇತರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕ್ರೀಡಾಕೂಟವು ಬಹುಮಾನ ವಿತರಣೆ, ಅದೃಷ್ಟ ಚೀಟಿ ವಿಜೇತರ ಘೋಷಣೆ ಹಾಗೂ ಧನ್ಯವಾದ ಸಮರ್ಪಣೆಯೊಂದಿಗೆ ಕೊನೆಗೊಂಡಿತು.

ವರದಿ: ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ.

Exit mobile version