Kundapra.com ಕುಂದಾಪ್ರ ಡಾಟ್ ಕಾಂ

ನಗದು ರಹಿತ ವ್ಯವಹಾರದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ

?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮುಂದಿನ ದಿನಗಳಲ್ಲಿ ನಗದು ವ್ಯವಹಾರ ಬಹುತೇಕ ಕೊನೆಗೊಳ್ಳುವ ಸಾಧ್ಯತೆಗಳಿದ್ದು ಎಲ್ಲರೂ ನಗದು ರಹಿತ ವ್ಯವಹಾರ ನಡೆಸಲು ಮಾನಸಿಕವಾಗಿ ಸಿದ್ಧರಾಗಬೇಕಿದೆ. ಎಲ್ಲಾ ಬ್ಯಾಂಕುಗಳಲ್ಲಿ ನಗದು ರಹಿತ ವ್ಯವಹಾರವನ್ನು ಉತ್ತೇಜಿಸಲು ಅನೇಕ ಆಪ್ ಸಿದ್ಧಪಡಿಸಿದ್ದು, ಇಂತಹ ಆಪ್‌ಗಳ ಬಗ್ಗೆ ಮಾಹಿತಿ ಪಡೆದುಕೊಂಡು ಇದರ ತಮ್ಮ ದೈನಂದಿನ ವ್ಯವಹಾರಗಳನ್ನು ನಡೆಸಬಹುದಾಗಿದೆ ಎಂದು ಕೆನರಾ ಬ್ಯಾಂಕಿನ ಉಡುಪಿ ರೀಜಿನಲ್ ಕಛೇರಿಯ ಅಧಿಕಾರಿ ಮನಿಷ್ ಹೇಳಿದರು.

ಅವರು ಗಂಗೊಳ್ಳಿ ಗ್ರಾಮ ಪಂಚಾಯತ್‌ನ ವತಿಯಿಂದ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನಗದು ರಹಿತ ವ್ಯವಹಾರದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗದು ರಹಿತ ವ್ಯವಹಾರದ ಬಗ್ಗೆ ಅನೇಕರಿಗೆ ಗೊಂದಲ ಸಂದೇಹಗಳಿವೆ. ನಗದು ರಹಿತ ವ್ಯವಹಾರ ಸುರಕ್ಷಿತವಾಗಿದ್ದು, ಮಾಹಿತಿ ಕೊರತೆಯಿಂದ ಜನರು ನಗದು ರಹಿತ ವ್ಯವಹಾರದ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿಲ್ಲ. ಭ್ರಷ್ಟಾಚಾರ ರಹಿತ ಸಮಾಜ ನಿರ್ಮಿಸಲು ನಗದು ರಹಿತ ವ್ಯವಹಾರ ಸಹಕಾರಿಯಾಗಲಿದೆ ಎಂದು ಹೇಳಿದ ಅವರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಗದು ರಹಿತ ವ್ಯವಹಾರ ನಡೆಸಲು ಆಪ್‌ಗಳನ್ನು ಅಭಿವೃದ್ಧಿಪಡಿಸಿದೆ. ಭಾರತ ಸರಕಾರ ಕೂಡ ಭೀಮ್ ಆಪ್‌ನ್ನು ಇತ್ತೀಚಿಗೆ ಪರಿಚಯಿಸಿದ್ದು ವಿಶ್ವದ ಅತ್ಯುತ್ತಮ ಆಪ್‌ಗಳಲ್ಲಿ ಇದು ಒಂದು ಎಂದು ಹೇಳಿದ ಅವರು ನಮ್ಮ ಖಾತೆಯ ಸಂಖ್ಯೆ, ಎಟಿಎಂ ಪಿನ್ ನಂಬರ್ ಸಹಿತ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಇತರ ಯಾವುದೇ ಮಾಹಿತಿಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ಬ್ಯಾಂಕ್ ವ್ಯವಹಾರಗಳ ಬಗ್ಗೆ ಸಮಸ್ಯೆ, ಸಂದೇಹಗಳಿದ್ದಲ್ಲಿ ಸಮೀಪದ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ಕೆನರಾ ಬ್ಯಾಂಕಿನ ಗಂಗೊಳ್ಳಿ ಶಾಖೆಯ ಸೀನಿಯರ್ ಮ್ಯಾನೇಜರ್ ಓಸ್ವಾಲ್ಡ್ ಜೆ. ಕಾರ್ವೆಲ್ಲೊ ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶೇಖರ್ ಜಿ. ವಂದಿಸಿದರು.

 

Exit mobile version