Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಸಮುದಾಯ ತಿಂಗಳ ಕಥಾ ಓದು: ಪದಗಳೇ ದೃಶ್ಯವಾಗುತ್ತಿದೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮುದಾಯ ಸಾಂಸ್ಕೃತಿಕ ಸಂಘಟನೆ  ಕುಂದಾಪುರ ಪ್ರತೀ ತಿಂಗಳೂ ಮೊದಲ ಭಾನುವಾರ ನಡೆಸುವ ತಿಂಗಳ ಕಥಾ ಓದು ಮಾಲಿಕೆಯಲ್ಲಿ ಡಿಸೆಂಬರ್ ತಿಂಗಳ ಈ ಭಾನುವಾರ ರಂಗನಿರ್ದೇಶಕರಾದ ವಾಸುದೇವ ಗಂಗೇರ ಅವರು ಸಾಹಿತಿ ವಸುಧೇಂದ್ರ ಅವರ ಜೀವನದ ಘಟನೆಗಳನ್ನಾಧರಿಸಿದ ಸರಳ ಪ್ರಬಂಧ ನಮ್ಮಮ್ಮ ಅಂದ್ರೆ ನಂಗಿಷ್ಟ” ದ ರಸವತ್ತಾದ ಓದನ್ನು ನಡೆಸಿಕೊಟ್ಟರು. ಲೇಖಕರ ಸ್ವಅನುಭವವನ್ನು ತನ್ನದೇ ಅನುಭವವೆನ್ನುವ ರೀತಿಯಲ್ಲಿ ಅಲ್ಲದೇ ಅದು ಕೇಳುಗರ ಅನುಭವವೂ ಆಗುವಂತೆ ನಿಜದ ಅರ್ಥದಲ್ಲಿ ಕಟ್ಟಿ ಕೊಡುವಲ್ಲಿ ಗಂಗೇರ ಅವರು ಯಶಸ್ವಿಯಾದರು. ಅವರ ಭಾಷಾ ಪರಿಪಕ್ವತೆ, ವೇಗ, ಓದಿನ ಶೈಲಿ ಕೇಳುಗರಿಗೆ ಪದಗಳೇ ದೃಶ್ಯಗಳಾಗಿ ಕಣ್ಮುಂದೆ ಹಾದುಹೋದಂತೆ ಭಾಸವಾಯಿತು. ಈ ಕುರಿತು ಎಲ್ಲರೂ ತಮ್ಮ ಅನುಭವವನ್ನು ಹಂಚಿಕೊಂಡರು.

ಜನವರಿ ತಿಂಗಳ ಈ ಭಾನುವಾರ ಕುಂದಾಪುರದ ರಂಗ ಅಧ್ಯಯನ ಕೇಂದ್ರದ ಉಪನ್ಯಾಸಕರಾದ ವಿನಾಯಕ ಅವರು ಸಾಹಿತಿ ಶ್ರೀನಿವಾಸ ವೈದ್ಯ ಅವರ ರಚನೆಯಾದ ಗಧೇ ಪಂಚವೀಸಿ” ಕಥೆಯ ರಸವತ್ತಾದ ಓದನ್ನು ನಡೆಸಿಕೊಟ್ಟರು. ಲೇಖಕರ ವಿಭಿನ್ನ ಭಾಷಾ ಶೈಲಿಯ ಈ ಕಥೆಯನ್ನು ಅದರ ಮೂಲ ಬಾಷಾ ಸೊಗಡನ್ನು ಉಳಿಸಿಕೊಳ್ಳುತ್ತಲೇ ಕಥೆಯೇ ದೃಶ್ಯ ರೂಪಕಗಳಾಗಿ ನಮ್ಮ ಕಣ್ಮುಂದೆ ಸರಿದುಹೋದಂತೆ ನಮಗೆ ಭಾಸವಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೊ. ಶಿವಾನಂದ ಕಾರಂತ, ರಾಜೀವ ನಾಯ್ಕ, ವಾಸುದೇವ ಗಂಗೇರ ಹಾಗೂ ಸುಧಾ ಅಡುಕಳ ಮತ್ತಿತರರು ಪ್ರತಿಕ್ರಿಯಿಸಿದರು.

ಸಮುದಾಯದ ಅಧ್ಯಕ್ಷರಾದ ಉದಯ ಗಾಂವಕರ್, ಕಾರ್ಯದರ್ಶಿ ಸದಾನಂದ ಬೈಂದೂರ್, ಸಂಘಟನಾ ಕಾರ್ಯದರ್ಶಿ ಜಿ ವಿ ಕಾರಂತ, ಜೊತೆ ಕಾರ್ಯದರ್ಶಿ ರವಿ ಕಟ್ಕೆರೆ, ಪ್ರೊ. ಹಯವದನ ಮೂಡುಸಗ್ರಿ ಹಾಗೂ ಸಮುದಾಯದ ಸಂಗಾತಿಗಳು ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಜಿ ವಿ ಕಾರಂತ ಕೃತಜ್ಞತೆ ಸಲ್ಲಿಸಿದರು, ಶಂಕರ ಆನಗಳ್ಳಿ, ಬಾಲಕೃಷ್ಣ, ಸಂದೇಶ ಹಾಗೂ ರವಿ ಕಟ್ಕೆರೆ ಸಹಕರಿಸಿದರು. ಸಮುದಾಯದ ಸಂಗಾತಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version