Kundapra.com ಕುಂದಾಪ್ರ ಡಾಟ್ ಕಾಂ

ಕನ್ನಡ ಶಾಲೆಗಳಲ್ಲಿ ಉತ್ತಮ ಶಿಕ್ಷಣದಿಂದ ಮಾತ್ರ ಉತ್ಕೃಷ್ಟ ಸಾಧನೆ ಸಾಧ್ಯ : ಡಾ. ಮೋಹನ್ ಆಳ್ವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಸರಕಾರ ಕನ್ನಡ ಮಾಧ್ಯಮದ ಪ್ರತಿ ವಿದ್ಯಾರ್ಥಿಯ ಮೇಲೆ ವರ್ಷಕ್ಕೆ ಇಪ್ಪತ್ತು ಸಾವಿರದಷ್ಟು ಹಣ ಖರ್ಚು ಮಾಡುತ್ತಿದ್ದರೂ, ಒಟ್ಟು ವ್ಯವಸ್ಥೆಯ ಇಚ್ಚಾಶಕ್ತಿಯ ಕೊರತೆಯಿಂದಾಗಿ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಅವರು ಬಸ್ರೂರು ನಿವೇದಿತಾ ಪ್ರೌಢಶಾಲೆಯಲ್ಲಿ ಈ ಭಾಗದ ೫ ಕನ್ನಡ ಮಾಧ್ಯಮ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಕೊಡಮಾಡುವ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು.

ಒಂದು ಕಾಲದಲ್ಲಿ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಕನ್ನಡ ಮಾಧ್ಯಮ ಶಾಲೆಗಳು ಇಂದು ಮುಚ್ಚುವ ಸ್ಥಿತಿಗೆ ಬಂದು ತಲುಪಿದೆ. ಕನ್ನಡ ಮಾಧ್ಯಮ ಶಾಲೆಗಳನ್ನೂ ಮಾದರಿ ವಿದ್ಯಾಸಂಸ್ಥೆಗಳಾಗಿ ಕಟ್ಟಬೇಕಿದೆ. ಉತ್ತಮ ಶಿಕ್ಷಣ ದೊರೆತರೆ ಕನ್ನಡ ಮಾಧ್ಯಮ ಮಕ್ಕಳು ಸೋಲುವ ಪ್ರಶ್ನೆಯೇ ಇಲ್ಲ. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಬೇಕಿದ್ದರೇ ಇಂದಿನಿಂದಲೇ ಪರೀಕ್ಷೆಗೆ ತಯಾರಿ ನಡೆಸಬೇಕಿದೆ. ಸ್ವಾಭಿಮಾನ, ಶ್ರದ್ಧೆಯಿಂದ ಓದು ಮನನ ಮಾಡುವುರಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಕೆ ಸಾಧ್ಯವಿದೆ ಎಂದವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ರಾಮ್‌ಕಿಶನ್ ಹೆಗ್ಡೆ, ನಿವೃತ್ತಿ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಉಪಸ್ಥಿತರಿದ್ದರು. ನಿವೇದಿತಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಣ ಸುಬ್ಬಣ್ಣ ಕೋಣಿ ಸ್ವಾಗತಿಸಿ, ಮುಖ್ಯೋಪಧ್ಯಾಯ ದಿನಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Exit mobile version