Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸೇವೆ ಮತ್ತು ತ್ಯಾಗ ನಮ್ಮ ರಾಷ್ಟ್ರೀಯ ಆದರ್ಶಗಳು. ಕರ್ತವ್ಯವೆಂಬ ಯಜ್ಞದ ಮೂಲಕ ನಾವು ದೇವರನ್ನು ಕಾಣಬೇಕು. ಇದಕ್ಕಿಂತ ದೊಡ್ಡ ಪೂಜೆ ಇನ್ನೊಂದಿಲ್ಲ. ವಿವೇಕನಿಧಿಯನ್ನು ಒಳಗೊಂಡಿರುವ ಮತ್ತು ಋಷಿ-ಮುನಿಗಳು ಪ್ರವರ್ತನಗೊಳಿಸಿದ ಭಾರತದ ಆಧ್ಯಾತ್ಮಿಕ ಪರಂಪರೆ, ಇಂದು ಭೌತಿಕ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಯಳಜಿತ್ ಶ್ರೀ ಸಿದ್ದಿವಿನಾಯಕ ಸಾಂಸ್ಕೃತಿಕ ಪ್ರತಿಷ್ಟಾನದ ಸಂಚಾಲಕ, ಸಂತ ವೈ. ಮಂಗೇಶ ಶೆಣೈ ಹೇಳಿದರು.

ಕರ್ನಾಟಕ ಸರಕಾರ ಕಾಲೇಜು ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬೈಂದೂರು ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ ೧೫೪ನೇ ಜನ್ಮದಿನಾಚರಣೆ ಪ್ರಯುಕ್ತ ನಡೆಯುವ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟಿಸಿ ಉಪನ್ಯಾಸ ನೀಡಿದರು. ಇಂದಿನ ಯುವಜನರು ಕವಲುದಾರಿಯಲ್ಲಿದ್ದಾರೆ. ಒಂದೆಡೆ ಹಣವಂತರು ಸುಖ, ವೈಭೋಗ, ಬೆಡಗು ಬಿನ್ನಾಣದಿಂದ ಕೂಡಿದ ಜೀವನ ನಡೆಸುತ್ತಿದ್ದರೆ, ಇನ್ನೊಂದೆಡೆ ಲಕ್ಷಾಂತರ ಜನರು ತಮ್ಮ ಜೀವನಕ್ಕಾಗಿ ಹೋರಾಡುತ್ತಿರುವ ಶೋಚನೀಯ ಪರಿಸ್ಥಿತಿಯಲ್ಲಿರುವುದು ಸರ್ವಕಾಲಿಕ ಸತ್ಯವಾಗಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ಸ್ವಾಮಿ ವಿವೇಕಾನಂದರ ಜೀವನತತ್ವ ಹಾಗೂ ಸಂದೇಶಗಳು ಬಹಳ ಉಪಯುಕ್ತವಾಗಬಲ್ಲದು. ಜಾತಿ, ಮತ ಭೇಧವಿಲ್ಲದೇ ಸರ್ವರಿಗೂ ಪ್ರೇರಣಾದಾಯಕವಾಗಿದೆ ವಿದ್ಯಾರ್ಥಿಗಳು ವಿವೇಕರ ತತ್ವ ಆದರ್ಶಗಳನ್ನು ಅನುಕರಿಸಿ ಅವರನ್ನು ಮಾದರಿಯಾಗಿಟ್ಟುಕೊಂಡು ಜೀವನದಲ್ಲಿ ಸಾಧಿಸಬೇಕಾಗಿದೆ. ಎಂದರು.

ಉಪನ್ಯಾಸಕ ಪಾಂಡುರಂಗ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಪ್ರಾರಂಭದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪನಮನ ಸಲ್ಲಿಸಲಾಯಿತು. ಉಪನ್ಯಾಸಕರಾದ ನಾಗೇಶ ದೇವಾಡಿಗ, ಗುರುರಾಜ್ ಉಪಸ್ಥಿತರಿದ್ದರು. ರವಿಚಂದ್ರ ಸ್ವಾಗತಿಸಿ, ಶಿಲ್ಪಾ ವಂದಿಸಿದರು. ಸಂಪ್ರೀತಾ ನಿರೂಪಿಸಿದರು. ಯಳಜಿತ್ ಶ್ರೀ ಸಿದ್ದಿವಿನಾಯಕ ಸಾಂಸ್ಕೃತಿಕ ಪ್ರತಿಷ್ಟಾನದ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ವಿವೇಕಾನಂದರ ಕುರಿತಾದ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ರಾಷ್ಟ್ರೀಯ ಯುವ ಸಪ್ತಾಹ ವಿಷಯಕ್ಕೆ ಸಂಬಂಧಿಸಿದಂತೆ ಒಂದು ವಾರಗಳ ಕಾಲ ಕಾಲೇಜಿನಲ್ಲಿ ವಿವಿಧ ಸ್ಪರ್ಧೆ ಹಾಗೂ ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ.

 

Exit mobile version