Kundapra.com ಕುಂದಾಪ್ರ ಡಾಟ್ ಕಾಂ

ದೇಶಪ್ರೇಮದ ಕಿಚ್ಚನ್ನು ಹಚ್ಚಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರು

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ನಮ್ಮ ಭಾರತ ದೇಶದ ಹೆಗ್ಗಳಿಕೆಯನ್ನು ಜಗತ್ತಿನಾದ್ಯಂತ ಪಸರಿಸಿದ, ಬದುಕಿನ ಅತ್ಯಲ್ಪ ಅವಧಿಯಲ್ಲಿ ಹಿಂದು ಧರ್ಮದ ಚೈತನ್ಯವನ್ನು ಉಣಬಡಿಸಿ ದೇಶಪ್ರೇಮದ ಕಿಚ್ಚನ್ನು ಹಚ್ಚಿ ಹೋದ ಮಹಾನ್ ಸಂತ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳು ನಮ್ಮ ಯುವಕರಿಗೆ ಮಾದರಿಯಾಗಬೇಕು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರೀಯವಾದಿಗಳಿಗೆ ವಿವೇಕಾನಂದರ ಜೀವನ ಮತ್ತು ಸಂದೇಶಗಳು ಬಹಳ ಪ್ರೇರಣೆ ನೀಡಿತ್ತು ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಅವರು ಗಂಗೊಳ್ಳಿಯ ಕ್ರಾಂತಿವೀರರ ಅಭಿಮಾನಿ ಬಳಗದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ೧೫೪ನೇ ಜನ್ಮದಿನೋತ್ಸವದ ಸಂಭ್ರಮಕ್ಕಾಗಿ ಗಂಗೊಳ್ಳಿ ಬಸ್ ನಿಲ್ದಾಣದ ಸಮೀಪದ ಜರಗಿದ ವಿವೇಕ ಉತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಕೋಮುವಾದ ಕೇಸರಿಕರಣದ ನೆಪದಿಂದ ಸರಕಾರ ಅನೇಕ ಕ್ರಾಂತಿವೀರರ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ನೀಡುತ್ತಿಲ್ಲ. ಶಾಲಾ ಕಾಲೇಜುಗಳಲ್ಲಿ ಎಲ್ಲವನ್ನೂ ಹಾಳು ಮಾಡಿ ಬಿಂಬಿಸುವ ಕಾಲ ಬಂದಿದೆ. ಹೀಗಾಗಿ ಪೋಷಕರು ಮನೆಗಳಲ್ಲಿ ತಮ್ಮ ಮಕ್ಕಳಿಗೆ ಕ್ರಾಂತಿವೀರರ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಮಹಾನ್ ದೇಶಭಕ್ತರ ಸಂದೇಶವನ್ನು ನೀಡಬೇಕು. ದೇಶ ಕಟ್ಟುವ ಕಾಯಕದಲ್ಲಿ ಯುವಕರು ಮುಂಚೂಣಿಗೆ ಬರಬೇಕು. ದೇಶ ಸದೃಢವಾಗಲು ಯುವಶಕ್ತಿಯನ್ನು ರಾಷ್ಟ್ರ ಕಟ್ಟುವ ಕಾಯಕಕ್ಕೆ ಉಪಯೋಗಿಸಿಕೊಳ್ಳಬೇಕು. ದೇಶವನ್ನು ತೆಗಳದೆ ದೇಶದ ಹಿರಿಮೆ, ಹೆಗ್ಗಳಿಕೆಯನ್ನು ವಿಶ್ವದಾದ್ಯಂತ ಪಸರಿಸಬೇಕು. ದೇಶದ ಘನಸ್ಥಿಕೆ ಗೌರವ ಇತರ ದೇಶಗಳಿಗೆ ಮಾದರಿಯಾಗಬೇಕಿದೆ. ಇದಕ್ಕಾಗಿ ನಾವು ನಮ್ಮ ಜೀವನವನ್ನು ದೇಶದ ಅಭಿವೃದ್ಧಿ, ಉನ್ನತಿ ಸಾರ್ವಭೌಮತ್ವಕ್ಕೆ ಮೀಸಲಿಡಬೇಕು ಎಂದು ಸ್ವಾಮೀಜಿಯವರು ನುಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕ ಪ್ರಮುಖ್ ಕಲ್ಮರ್ಗಿ ಗಣೇಶ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಮುಂಬೈನ ಉದ್ಯಮಿ ರತ್ನಾಕರ ಶೆಟ್ಟಿ ಬಡಾಮನೆ ಗಿಳಿಯಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಪ್ರಕಾಶ ಮಲ್ಪೆ ದಿಕ್ಸೂಚಿ ಭಾಷಣ ಮಾಡಿದರು. ಬಂಟ್ವಾಡಿಯ ಉದ್ಯಮಿ ರಾಮರಾಯ ಕಾಮತ್, ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಪೂಜಾರಿ ಶುಭ ಹಾರೈಸಿದರು.

ಗಂಗೊಳ್ಳಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡ ಮಾಡಿದ ’ವಿವೇಕ ಪ್ರಶಸ್ತಿ’ಯನ್ನು ಶಾಲೆಯ ಮುಖ್ಯ ಶಿಕ್ಷಕಿ ಸುಜಾತಾ ಕೆ. ಅವರಿಗೆ ಪ್ರದಾನ ಮಾಡಲಾಯಿತು. ದಿನಕರ ಶೆಣೈ ಗಂಗೊಳ್ಳಿ, ರತ್ನಾಕರ ಬೈಂದೂರು, ದೀಪಕ ಮಡಿವಾಳ ಗಂಗೊಳ್ಳಿ, ಸುಬ್ರಹ್ಮಣ್ಯ ಭಂಡಾರಿ ಕುಂದಾಪುರ, ರಾಜೇಶ ಮೊಗವೀರ ಗಂಗೊಳ್ಳಿ ಇವರುಗಳಿಗೆ ನಮ್ಮೂರ ಸೈನಿಕರ ’ಸೇನಾ ಸತ್ಕಾರ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಮನೆಗೊಂದು ಗಿಡ ಅಭಿಮಾನದಡಿ ’ಹಸಿರು ಕ್ರಾಂತಿ’ ಕಾರ್ಯಕ್ರಮಕ್ಕೆ ಮತ್ತು ’ಗೋ ಭಿಕ್ಷಾ ಅಭಿಯಾನ’ಕ್ಕೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ.ಮಂಜುನಾಥ, ಗಂಗೊಳ್ಳಿಯ ಸಾಮಾಜಿಕ ಕಾರ್ಯಕರ್ತ ವೆಂಕಟೇಶ ಖಾರ್ವಿ ದೊಡ್ಡಹಿತ್ಲು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಪೋರ್ಟ್ ಆಫೀಸಿನ ಸಮೀಪ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪಂಚಗಂಗಾವಳಿ ನದಿಗೆ ಗಂಗಾ ಭಾಗೀನ ಅರ್ಪಿಸಲಾಯಿತು.
ಅಕ್ಷಯ್ ಖಾರ್ವಿ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಮಹೇಶ ಖಾರ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಂದರ ಜಿ. ಸನ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ನವೀನ್ ಖಾರ್ವಿ ವಂದಿಸಿದರು.

Exit mobile version