Kundapra.com ಕುಂದಾಪ್ರ ಡಾಟ್ ಕಾಂ

ಮಹಿಳೆಯರಿಂದ ಆರೋಗ್ಯಯುತ ಸಮಾಜ ನಿರ್ಮಾಣ: ಭಾರತಿ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಹಿಳೆಯರಿಂದ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯವಿದೆ. ಆಕೆ ಎಚ್ಚೆತ್ತರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಬಹುದು. ಹಾಗಾಗಿ ಮಹಿಳೆಯರು ರಾಜಕೀಯವಾಗಿ ಗುರುತಿಸಿಕೊಳ್ಳವಂತಾಗಬೇಕು ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದರು.

ನಾಗೂರು ಶ್ರೀ ಕೃಷ್ಣಲಲಿತಾ ಕಲಾ ಮಂದಿರದಲ್ಲಿ ನಡೆದ ಬೈಂದೂರು ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮಗು ಜನಿಸಿದಾಗ ಅದರ ಮುಖ ನೋಡಿ ಪಡುವ ಖುಷಿಯಲ್ಲಿ ಹೆರಿಗೆ ಸಮಯದಲ್ಲಿ ಅನುಭವಿಸುವ ವೇದನೆಯನ್ನು ಮರೆಯುತ್ತೇವೆ. ಹಾಗೆಯೇ ದೇಶಕ್ಕೆ ಸ್ವಾತಂತ್ರ್ಯವೂ ಒಂದೇ ದಿನದಲ್ಲಿ ಸಿಗಲಿಲ್ಲಾ. ನೋಟು ರದ್ದತಿಯಿಂದ ಈಗ ಸ್ವಲ್ಪ ತೊಂದರೆಯಾದರೂ ಕೂಡಾ ಮುಂದಿನ ದಿನಗಳು ಸಂತೋಷದಾಯಕವಾಗಲಿದೆ ಎಂದು ನೆರೆಯ ದೇಶಗಳಿಂದ ಹರಿದು ಬರುವ ಸುಮಾರು ೫೦ ಸಾವಿರ ಕೋಟಿ ರೂ. ಕಪ್ಪು ಹಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ದಿಢೀರನೆ ೫೦೦ ಹಾಗೂ ೧೦೦೦ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಕ್ರಮವನ್ನು ಸಮರ್ಥಿಸಿಕೊಂಡರು. ರಾಜ್ಯದಲ್ಲಿ ಬಿಜೆಪಿ ಸರ್ಕಾರಾವಧಿಯಲ್ಲಿ ಜಾರಿಗೆ ಬಂದ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಭಾಗ್ಯಲಕ್ಷ್ಮೀಯಂತಹ ಹಲವು ಯೋಜನೆಗಳು ಹಳ್ಳಹಿಡಿದಿದ್ದು ಹಾಗೂ ಕೇಂದ್ರದಲ್ಲಿ ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮತದಾರರ ಮನೆಮನೆಗೆ ತೆರಳಿ ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಅಧ್ಯಕ್ಷತೆವಹಿಸಿದ್ದರು. ಮಹಿಳಾಮೋರ್ಚಾದ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿಯವರನ್ನು ಗೌರವಿಸಲಾಯಿತು. ಈ ಸಂಧರ್ಭದಲ್ಲಿ ರೇವತಿ ಪೂಜಾರಿ, ಅನುಸೂಯ ಗಾಣಿಗ, ತುಂಗಾ ಶೆಟ್ಟಿ, ತುಂಗಾ ಕಿಣಿ ಬಿಜೆಪಿ ಸೇರ್ಪಡೆಗೊಂಡರು.
ಬಿಜೆಪಿ ರಾಜ್ಯ ಕಾರ‍್ಯಕಾರಿಣಿ ಸದಸ್ಯ ಬಿ.ಎಂ. ಸುಕುಮಾರ ಶೆಟ್ಟಿ, ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸದಸ್ಯರಾದ ಗೀತಾಂಜಲಿ ಸುವರ್ಣ, ಶೋಭಾ ಪುತ್ರನ್, ಬೈಂದೂರು ಕ್ಷೇತ್ರ ಯುವ ಮೋರ್ಚಾದ ಅಧ್ಯಕ್ಷ ಶರತ್ ಕುಮಾರ ಶೆಟ್ಟಿ ಉಪ್ಪುಂದ, ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಸಂಧ್ಯಾ ರಮೇಶ್, ವೀಣಾ ಶೆಟ್ಟಿ, ರಶ್ಮಿ ಶೆಟ್ಟಿ, ಶ್ಯಾಮಲಾ ಕುಂದರ್ ಉಪಸ್ಥಿತರಿದ್ದರು. ಬೈಂದೂರು ಕ್ಷೇತ್ರ ಬಿಜೆಪಿ ಮಹಿಳ ಮೋರ್ಚಾದ ಅಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು, ದೀಪಾ ಶೆಟ್ಟಿ, ಸ್ವಾಗತಿಸಿದರು, ಮಾಲಿನಿ ಕೆ ವರದಿ ವಾಚಿಸಿ, ಜಯಂತಿ ನಿರೂಪಿಸಿದರು.

ರಾಜ್ಯದಲ್ಲಿ ಸರ್ಕಾರ ನಿಷ್ಕ್ರೀಯವಾಗಿದ್ದು, ಮಹಿಳೆಯರಿಗೆ ರಕ್ಷಣೆಯಿಲ್ಲ, ರಾಜ್ಯದಲ್ಲಿ ಕೊಲೆ, ಅತ್ಯಾಚಾರ, ಸುಲಿಗೆ ದಿನಂದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಅಲ್ಲದೇ ದಕ್ಷ ಅಧಿಕಾರಿಗಳು ರಕ್ಷಣಿಯಿಲ್ಲದಂತಾಗಿದ್ದು, ಸರ್ಕಾರದ ಕಾರ‍್ಯವೈಖರಿಯನ್ನು ನೋಡುವಾಗ ಅಸಹ್ಯ ಹುಟ್ಟಿಸುತ್ತದೆ

Exit mobile version