Kundapra.com ಕುಂದಾಪ್ರ ಡಾಟ್ ಕಾಂ

ಜ 21-22: ಬೆಂಗಳೂರಿನಲ್ಲಿ ನಮ್ಮೂರ ಹಬ್ಬಕ್ಕೆ ವೇದಿಕೆ ಸಜ್ಜು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಕರಾವಳಿ ಭಾಗದ ಸಂಸ್ಕೃತಿ, ಜನಪದ ಆಚರಣೆ, ಕ್ರೀಡೆ, ಜೀವನ ಶೈಲಿಯ ಶ್ರೀಮಂತಿಕೆ ಮತ್ತು ಕರಾವಳಿಯ ಖಾದ್ಯಗಳ ವೈವಿಧ್ಯತೆಯನ್ನು ಬೆಂಗಳೂರಿಗರಿಗೆ ಪರಿಚಯಿಸುವುದರ ಜೊತೆಗೆ ಇಲ್ಲಿ ನೆಲೆಸಿರುವ ಕರಾವಳಿಗರ ಅಪರೂಪದ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ಮಹದಾಸೆಯೊಂದಿಗೆ ಬೆಂಗಳೂರಿನಲ್ಲಿ ಆಯೋಜಿಸುತ್ತಿರುವ ‘ನಮ್ಮೂರ ಹಬ್ಬ 2017’ಕ್ಕೆ ಸಕಲ ಸಿದ್ಧತೆ ನಡೆದಿದೆ.

[quote font_size=”15″ bgcolor=”#ffffff” bcolor=”#dd3333″ arrow=”yes” align=”right”]ಜನವರಿ 21-22 ಶನಿವಾರ ಹಾಗು ಭಾನುವಾರ ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರಿನ ಜಯನಗರದ 5ನೇ ಹಂತದಲ್ಲಿರುವ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ (ಶಾಲಿನಿ ಗ್ರೌಂಡ್) ನಮ್ಮೂರ ಹಬ್ಬ ನಡೆಯಲಿದೆ.[/quote]

ಹದಿನೈದು ಲಕ್ಷದಷ್ಟು ಕರಾವಳಿಯ ಮಂದಿ ಬದುಕು ಅರಸಿ ಬೆಂಗಳೂರಿನಲ್ಲಿಯೇ ನೆಲೆಸಿದ್ದರೂ ಕರಾವಳಿಯ ತಾಯಿಬೇರಿನ ಜೊತೆಗಿನ ಅನುಬಂಧವನ್ನು ಕಡಿದುಕೊಳ್ಳದೆ ಜತನದಿಂದ ಕಾಪಿಟ್ಟುಕೊಂಡಿದ್ದಾರೆ. ಇವರೆಲ್ಲರನ್ನೂ ಒಂದೇ ಸೂರಿನಡಿ ನೋಡುವ, ಅಪರೂಪದ ಕಲಾವಿದರಿಗೆ ವೇದಿಕೆ ಕೊಡುವ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಮೆಲುಕು ಹಾಕುವ ಹಾಗು ಸಂಸ್ಕೃತಿ ವಿನಿಮಯದಂತಹ ಸದುದ್ದೇಶದಿಂದ ಸತತವಾಗಿ ನಮ್ಮೂರ ಹಬ್ಬ ಆಯೋಜಿಸಲಾಗುತ್ತಿದೆ.

ಮೊದಲ ದಿನ ಉದ್ಘಾಟನೆ ಹಾಗೂ ಮತ್ತೇನಿದೆ?
ಶನಿವಾರ ಬೆಳಿಗ್ಗೆ 10:30ಕ್ಕೆ ನಮ್ಮೂರ ಹಬ್ಬವು ಉದ್ಘಾಟನೆಗೊಳ್ಳಲಿದ್ದು ಗಣ್ಯರ ಸಮ್ಮುಖದಲ್ಲಿ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಭುಜಂಗ ಕೊರಗ ಅವರು ಕರಾವಳಿಯ ಸಾಂಪ್ರದಾಯಿಕ ಶೈಲಿಯಲ್ಲಿ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸರಕಾರದ ಮೀನುಗಾರಿಕಾ ಮತ್ತು ಕ್ರೀಡಾ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಆಹಾರೋತ್ಸವವನ್ನು ಉದ್ಯಮಿಗಳಾದ ಜಿ. ಶ್ರೀನಿವಾಸರಾವ್ , ನಮ್ಮೂರ ಸಂತೆಯನ್ನು ಕೆ.ಚಂದ್ರಶೇಖರ್ ಫೋಟೋ ಸಂತೆಯನ್ನು ಮಾಲತಿ ಮತ್ತು ಸೋಮಶೇಖರ ದಂಪತಿಗಳು, ಕಾರ್ಟೂನು ಹಬ್ಬವನ್ನು ಹಿರಿಯ ವ್ಯಂಗ್ಯ ಚಿತ್ರಕಾರರಾದ ಪ್ರಕಾಶ್ ಶೆಟ್ಟಿ , ಬಯಲಾಟವನ್ನು ಖ್ಯಾತ ಕಬಡ್ಡಿ ಆಟಗಾರರಾದ ಸುಕೇಶ್ ಹೆಗ್ಡೆ ಮತ್ತು ಸೆಲ್ಫಿ ಮನೆಯನ್ನು ಉದ್ಯಮಿಗಳಾದ ದಿನೇಶ್ ವೈದ್ಯ ಅಂಪಾರು ಅವರು ಉದ್ಘಾಟಿಸಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸಂಜೆ ಗಣ್ಯರ ಸಮ್ಮುಖದಲ್ಲಿ ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ನ ಪ್ರತಿಷ್ಠಿತ ‘ಕಿರೀಟ’ ಪ್ರಶಸ್ತಿಯನ್ನು ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಅವರಿಗೆ ಪ್ರದಾನ ಮಾಡಲಾಗುತ್ತಿದ್ದು ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾದ ಯು.ಟಿ.ಖಾದರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.

ಎಂದಿನಂತೆ ಈ ಬಾರಿಯೂ ನಮ್ಮೂರ ಹಬ್ಬ ಹಲವು ಸಾಂಸ್ಕೃತಿಕ ಸಡಗರಗಳಿಗೆ ವೇದಿಕೆಯಾಗಲಿದ್ದು ಮುಖ್ಯವಾಗಿ ಕರಾವಳಿಯ ಜನಪದ ವಾದ್ಯಗಳ ಮಹಾಮೇಳ, ನಾಡಿನ ಜನಪ್ರಿಯ ಗಾಯಕರಾದ ಎಂ.ಡಿ.ಪಲ್ಲವಿ, ಸುಪ್ರಿಯಾ ರಘುನಂದನ್, ವಿನಯ್ ನಾಡಿಗ್, ಅಭಿನವ್ ಭಟ್ ಹಾಗು ಸಾನ್ವಿ ಶೆಟ್ಟಿ ಆಯ್ದ ಜನಪ್ರಿಯ ಭಾವಗೀತೆ ಹಾಗು ಸಿನೆಮಾ ಹಾಡುಗಳನ್ನು ಹಾಡುವುದರ ಮೂಲಕ ರಂಜಿಸಲಿದ್ದಾರೆ. “ಕರಾವಳಿ ವೈಭವ” ಎನ್ನುವ ವಿಶೇಷ ನೃತ್ಯ ರೂಪಕ, ಯಕ್ಷಗಾನದ ವಿಭಿನ್ನ ವೇಷಗಳ ಯಕ್ಷ ರೂಪಕ, ಚಂದನ್ ಶೆಟ್ಟಿ ಅವರಿಂದ ಕನ್ನಡದ ರ್ಯಾ ಪ್ ಹಾಡುಗಳು , ರಾಘವೇಂದ್ರ ಹೆಗಡೆ ಅವರಿಂದ ಮರಳು ಚಿತ್ರಕಲೆ ನೆರೆದವರನ್ನು ರಂಜಿಸಲಿವೆ.  ಚಪ್ಪರ ಎನ್ನುವ ಎರಡನೇ ವೇದಿಕೆಯಲ್ಲಿ ಭಜನೆ, ಮಕ್ಕಳ ಯಕ್ಷಗಾನ, ಜಾದು ಮೂರು ವರ್ಷದ ಒಳಗಿನ ಮಕ್ಕಳಿಗಾಗಿ ಮುದ್ದು ರಾಧಾ-ಮುದ್ದು ಕೃಷ್ಣ ಸ್ಪರ್ಧೆ ನಡೆಯಲಿವೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಎರಡನೇ ದಿನ ಏನೇನು?
ಬೆಳಿಗ್ಗೆ 10 ಗಂಟೆಯಿಂದ ಅಪರೂಪದ ಜನಪದ ಕ್ರೀಡೆಗಳಿಗೆ ವೇದಿಕೆಯಾದ ಬಯಲಾಟಕ್ಕೆ ಚಾಲನೆ ಸಿಗಲಿದ್ದು ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆ, ವಯಸ್ಕರರಿಗಾಗಿ ಹಗ್ಗ ಜಗ್ಗಾಟ ಹಾಗು ಇತರೇ ಕರಾವಳಿಯ ಗ್ರಾಮೀಣ ಕ್ರೀಡೆಗಳು ಇರಲಿವೆ.

ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹೊರನಾಡಿನ ಯುವ ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ ಅವರಿಗೆ ವೈಯುಕ್ತಿಕ ಸಾಧನೆಗಾಗಿ ‘ಕಿರೀಟ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು ಈ ಸಂದರ್ಭದಲ್ಲಿ ಮಾನ್ಯ ಕೇಂದ್ರ ಸಚಿವರುಗಳಾದ ಅನಂತ ಕುಮಾರ್, ಸದಾನಂದ ಗೌಡ, ಖ್ಯಾತ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್, ಸ್ಥಳೀಯ ಶಾಸಕರಾದ ಬಿ. ಎನ್. ವಿಜಯಕುಮಾರ್ ಹಾಗು ಇನ್ನಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.

ಸಂಜೆಯ ಮನರಂಜನೆಯ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಯೋಜನೆಯಲ್ಲಿ ಪಾಶ್ಚಾತ್ಯ ಮತ್ತು ಕರಾವಳಿ ವಾದ್ಯಗಳ ವಿಭಿನ್ನ ಜುಗಲ್‌ಬಂದಿ, ಡ್ರಾಮಾ ಜೂನಿಯರ್ ಖ್ಯಾತಿಯ ಅಚಿಂತ್ಯ, ಮಹೇಂದ್ರ, ತುಷಾರ್, ಸೂರಜ್ ಅವರಿಂದ ನಮ್ಮೂರ್ ಡ್ರಾಮಾ, ಅಂತರಾಷ್ಟ್ರೀಯ ಖ್ಯಾತಿಯ ಸರವಣ ಧನಪಾಲ್ ಅವರ ವಿಶೇಷ ನೃತ್ಯ, ಕರಾವಳಿಯ ಅಂತರರಾಷ್ಟ್ರೀಯ ಪ್ರತಿಭೆಗಳಿಂದ ನೃತ್ಯೋತ್ಸವ ಹಾಗು ಇನ್ನಿತರ ಮನರಂಜನೀಯ ಕಾರ್ಯಕ್ರಮಗಳು ಈ ಬಾರಿಯ ನಮ್ಮೂರ ಹಬ್ಬವನ್ನು ಅವಿಸ್ಮರಣೀಯಗೊಳಿಸಲಿವೆ. ಚಪ್ಪರದ ವೇದಿಕೆಯಲ್ಲಿ ಸುಗಮ ಸಂಗೀತ, ಕುಡುಂಬಿ ಮತ್ತು ಕೊರಗ ಜನಾಂಗದ ಸಾಂಪ್ರದಾಯಿಕ ಕಾರ್ಯಕ್ರಮ, ಮಕ್ಕಳಿಗೆ ಚಿತ್ರಕಲಾಸ್ಪರ್ಧೆ , ಆದರ್ಶ ದಂಪತಿ ಸ್ಪರ್ಧೆ ನಡೆಯಲಿವೆ.

ಎರಡೂ ದಿನವೂ ಏನೇನಿದೆ?
ಗಾಳಿಪಟ ಉತ್ಸವ, ಫೋಟೋ ಸಂತೆ ಮತ್ತು ಕಾರ್ಟೂನು ಹಬ್ಬವು ಈ ಬಾರಿಯ ವಿಶೇಷ ಆಕರ್ಷಣೆಯಾಗಿರಲಿದೆ. ಈ ಎಲ್ಲ ಮನರಂಜನೆಯ ಜೊತೆಗೆ ನಮ್ಮೂರ ಹಬ್ಬದಲ್ಲಿ ಕರಾವಳಿಯಿಂದ ಬಂದ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸುವ ನೀರು ದೋಸೆ, ಹಾಲುಬಾಯಿ, ಕಾಯಿ ಕಡುಬು, ಗೋಲಿಬಜೆ, ಪತ್ರೊಡೆ, ಉದ್ದಿನ ದೋಸೆ, ಕಡಲ ಏಡಿಯ ಸುಕ್ಕ, ಕೋರಿ ರೊಟ್ಟಿ, ಮೀನು ಹಾಗು ಸಿಗಡಿ ಬಳಸಿ ತಯಾರಿಸಿದ ಅಪರೂಪದ ಖಾದ್ಯಗಳು ನಮ್ಮೂರ ಹಬ್ಬಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಲು ಮತ್ತಷ್ಟು ಆಕರ್ಷಣೆಯಾಗಲಿವೆ. ಹಾಗು ಕರಾವಳಿಯಿಂದ ತಂದ ತಾಜಾ ತರಕಾರಿಗಳ ಮಾರಾಟದ ಜೊತೆಗೆ ಇನ್ನಿತರ ವಿಶೇಷ ವಸ್ತುಗಳು ಕೂಡ ಲಭ್ಯವಿರುತ್ತದೆ.

Exit mobile version