Kundapra.com ಕುಂದಾಪ್ರ ಡಾಟ್ ಕಾಂ

ಸಮಾಜದ ಬೆಳವಣಿಗೆಯಲ್ಲಿ ಪತ್ರಿಕೆಯ ಪಾತ್ರ ಮಹತ್ತರ: ಗೋಪಾಲಕೃಷ್ಣ ರಾವ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಹಿಷಾಸುರ ಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರದ ಸಂದರ್ಭದಲ್ಲಿ ಸಮಾಜದ ಮುಖವಾಣಿಯಾಗಿ ಪತ್ರಿಕೆ ಇರಬೇಕು ಎನ್ನುವ ನೆಲೆಯಲ್ಲಿ ಮಹಿಷಾಮರ್ದಿನಿ ಪತ್ರಿಕೆಯನ್ನು ಆರಂಬಿಸಲಾಯಿತು. ಸಮಾಜದ ಅಭಿವೃದ್ದಿಯಲ್ಲಿ ಪತ್ರಿಕೆಗಳ ಪಾತ್ರ ಮಹತ್ತರವಾಗಿದ್ದು, ಸಮಾಜದಲ್ಲಿ ಸಾಕಷ್ಟು ಸಂಖ್ಯೆಯ ಪ್ರತಿಭಾನ್ವಿತರು, ಬರಹಗಾರರು ಇದ್ದಾರೆ. ಅವರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮಹಿಷಾಮರ್ದಿನಿ ನಿರಂತರವಾಗಿ ಸಮಾಜದ ವಿಚಾರಗಳನ್ನು ಬಿಂಬಿಸುತ್ತಿರಲಿ ಎಂದು ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ) ಹೋಬಳಿಯ ಗೌರವಾಧ್ಯಕ್ಷರಾದ ಕಟ್ಟೆ ಗೋಪಾಲಕೃಷ್ಣ ರಾವ್ (ಬೋಜಣ್ಣ) ಅಭಿಪ್ರಾಯ ಪಟ್ಟರು.

ಬಗ್ವಾಡಿಯ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ  ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನ ಬಗ್ವಾಡಿ ಇದರ ‘ಮಹಿಷಾಸುರ ಮರ್ದಿನಿ’ ಮಾಸ ಪತ್ರಿಕೆಯ ನೂತನ ಸಂಪಾದಕ ಮಂಡಳಿಯ ಮೊದಲ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ) ಹೋಬಳಿಯ ಅಧ್ಯಕ್ಷರಾದ ಕೆ.ಕೆ ಕಾಂಚನ್ ಮಾತನಾಡಿ, ಸಮಾಜದ ಆಗುಹೋಗುಗಳನ್ನು ಸಮಾಜದ ಬೇರೆ ಬೇರೆ ಪ್ರದೇಶದ ಜನರಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಪತ್ರಿಕೆ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿ ಸುಪ್ತವಾಗಿರುವ ಪ್ರತಿಭೆಗಳ ಪರಿಚಯ, ಸಾಧನೆಗಳ ವಿವರಗಳನ್ನು ಮೊಗವೀರ ಸಮಾಜ ಬಾಂಧವರಿಗೆ ತಿಳಿಯಪಡಿಸುವ ಕಾರ್ಯ ಮಾಡುತ್ತಿದೆ. ಪ್ರಸ್ತುತ ಹೊಸ ಸಂಪಾದಕ ಮಂಡಳಿಯೊಂದಿಗೆ ಇನ್ನಷ್ಟು ಹೊಸತನದೊಂದಿಗೆ ಪತ್ರಿಕೆ ಸಮಾಜ ಬಾಂಧವರಿಗೆ ಸಿಗಲಿದೆ ಎಂದರು.

ಮೊಗವೀರ ಯುವ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಗಣೇಶ ಕಾಂಚನ್ ಶುಭ ಹಾರೈಸಿ ಸಮಾಜಕ್ಕೆ ಖಾಸಗಿ ಪತ್ರಿಕೆಯ ಮಹತ್ವ ವಿವರಿಸಿದರು. ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ) ಹೋಬಳಿಯ ಉಪಾಧ್ಯಕ್ಷರಾದ ಪುಂಡಲೀಕ ಬಂಗೇರ, ಬಿ.ಸಿ. ಕುಂದರ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ಹೆರಿಯಣ್ಣ ಚಾತ್ರಬೆಟ್ಟು, ರಾಜು ಶ್ರೀಯಾನ್, ಎಂ.ಎನ್.ಚಂದನ್, ಶಂಕರ ಜಿ.ಹೆಮ್ಮಾಡಿ, ಸುಬ್ಬಯ್ಯ ಶ್ರೀಯಾನ್, ಮಂಜು ತೋಳಾರ್, ಎಂ.ಆರ್.ನಾಯ್ಕ್, ಆನಂದ, ಪಾಂಡುರಂಗ ಬೈಂದೂರು, ಪ್ರವೀಣ್ ಮೊಗವೀರ ಗಂಗೊಳ್ಳಿ, ಕೆ.ಆರ್. ರಮೇಶ, ಸುಧಾಕರ ಕಾಂಚನ್, ದಿವಾಕರ ಮೆಂಡನ್, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಮಾಜಿ ಅಧ್ಯಕ್ಷರಾದ ಸದಾನಂದ ಬಳ್ಕೂರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪತ್ರಿಕೆಯ ನೂತನ ಸಂಪಾದಕರಾದ ಕುಮಾರ ಶಂಕರನಾರಾಯಣ ಅವರನ್ನು ಸನ್ಮಾನಿಸಲಾಯಿತು. ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ) ಹೋಬಳಿಯ ಕಾರ್ಯದರ್ಶಿ ಸುರೇಶ ವಿಠಲವಾಡಿ ಸ್ವಾಗತಿಸಿ, ವಂದಿಸಿದರು.

Exit mobile version